×
Ad

ನೆತನ್ಯಾಹು ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ಮುಂದೂಡಬೇಕು: ನೆತನ್ಯಾಹು ಪರ ವಕೀಲರ ಮನವಿ

Update: 2025-06-26 22:04 IST

 ಬೆಂಜಮಿನ್ ನೆತನ್ಯಾಹು | PC : PTI  

ಟೆಲ್ ಅವೀವ್: ಮುಂದಿನ ಹದಿನೈದು ದಿನಗಳ ಕಾಲ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣದಲ್ಲಿ ಅವರ ಸಾಕ್ಷ್ಯದ ವಿಚಾರಣೆಯನ್ನು ಮುಂದೂಡಬೇಕು ಎಂದು ಅವರ ಪರ ವಕೀಲರು ಇಸ್ರೇಲ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ ಎಂದು ಇಸ್ರೇಲ್ ಮಾಧ್ಯಮ ಸಂಸ್ಥೆ ‘Haaretz’ ಅನ್ನು ಉಲ್ಲೇಖಿಸಿ Aljazeera ವರದಿ ಮಾಡಿದೆ.

“ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಗಾಝಾದಲ್ಲಿ ನಡೆಯುತ್ತಿರುವ ಯುದ್ಧ ಹಾಗೂ ಒತ್ತೆಯಾಳು ಬಿಕ್ಕಟ್ಟನ್ನು ನಿರ್ವಹಿಸುವುದು ಸೇರಿದಂತೆ, ರಾಜತಾಂತ್ರಿಕ, ರಾಷ್ಟ್ರೀಯ ಹಾಗೂ ಭದ್ರತಾ ಸಮಸ್ಯೆಗಳು ಪ್ರಮುಖ ಆದ್ಯತೆಗಳಾಗಿರುವುದರಿಂದ, ಅವರು ತಮ್ಮ ತಮ್ಮ ಎಲ್ಲ ಸಮಯಾವಕಾಶ ಹಾಗೂ ಶಕ್ತಿಯನ್ನು ಅದಕ್ಕಾಗಿ ಮೀಸಲಿಡಬೇಕಾಗಿ ಬಂದಿದೆ” ಎಂದು ಅವರ ಪರ ವಕೀಲ ಅಮಿತ್ ಹದಾದ್ ನ್ಯಾಯಾಲಯಕ್ಕೆ ತಿಳಿಸಿದರು ಎಂದು ವರದಿಯಾಗಿದೆ. ಇದರೊಂದಿಗೆ ಇರಾನ್ ನೊಂದಿಗಿನ ಯುದ್ಧ ಹಾಗೂ ಇನ್ನಿತರ ಪ್ರಾಂತೀಯ ಮತ್ತು ಜಾಗತಿಕ ಬೆಳವಣಿಗೆಗಳನ್ನೂ ಅವರು ಈ ವೇಳೆ ಉಲ್ಲೇಖಿಸಿದರು ಎಂದು ಹೇಳಲಾಗಿದೆ.

ಲಂಚ, ವಂಚನೆ ಹಾಗೂ ವಿಶ್ವಾಸ ದ್ರೋಹದ ಆರೋಪಗಳಲ್ಲಿ 2019ರಲ್ಲಿ ನೆತನ್ಯಾಹು ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರ, 2020ರಿಂದ ಅವರ ವಿಚಾರಣೆ ಪ್ರಾರಂಭಗೊಂಡಿತ್ತು. ಆದರೆ, ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದ ನೆತನ್ಯಾಹು, ತಾನು ನಿರ್ದೋಷಿ ಎಂದು ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News