×
Ad

ದಕ್ಷಿಣ ಕೊರಿಯಾ ವಿಪಕ್ಷ ನಾಯಕನಿಗೆ ಚೂರಿ ಇರಿತ

Update: 2024-01-02 16:16 IST

Screengrab:X/@Reuters

ಸಿಯೋಲ್: ದಕ್ಷಿಣ ಕೊರಿಯಾದ ವಿಪಕ್ಷ ಡೆಮಾಕ್ರೆಟಿಕ್ ಪಕ್ಷದ ಮುಖ್ಯಸ್ಥ, ತಮ್ಮ ಕಟು ಮಾತುಗಳಿಗೆ ಹೆಸರಾದ ಲೀ ಜೇ-ಮಯುಂಗ್ ಅವರ ಕುತ್ತಿಗೆಗೆ ಇಂದು ಬುಸಾನ್ ನಗರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಚೂರಿಯಿಂದ ಇರಿದಿದ್ದಾನೆ. ತೀವ್ರ ಗಾಯಗೊಂಡಿರುವ 59 ವರ್ಷದ ಲೀ ಅವರನ್ನು ಬುಸಾನ್ನಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಸಿಯೋಲ್ನ ಆಸ್ಪತ್ರೆಯೊಂದಕ್ಕೆ ಶಸ್ತ್ರಕ್ರಿಯೆಗಾಗಿ ಏರ್ಲಿಫ್ಟ್ ಮಾಡಲಾಗಿದೆ.

ದಾಳಿಯ ನಂತರವೂ ಅವರು ಎಚ್ಚರದಿಂದಲೇ ಇದ್ದರು ಹಾಗೂ ಅವರ ಪರಿಸ್ಥಿತಿ ಗಂಭೀರವಾಗಿಲ್ಲ ಎಂದು ಸ್ಥಳದಲ್ಲಿದ್ದ ಪೊಲೀಸ್ ಮತ್ತು ತುರ್ತು ಸೇವೆಯ ಅಧಿಕಾರಿಗಳು ಹೇಳಿದ್ದರೂ ಅವರ ಆರೋಗ್ಯದ ಕುರಿತ ನಿಖರ ಮಾಹಿತಿ ಲಭ್ಯವಾಗಿಲ್ಲ.

ಲೀ ಅವರು ಬುಸಾನ್ ನಲ್ಲಿ ವಿಮಾನ ನಿಲ್ದಾಣದ ಪ್ರಸ್ತಾವಿತ ಸ್ಥಳವನ್ನು ಪರಿಶೀಲಿಸಿ ಪತ್ರಕರ್ತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚತನೊಬ್ಬ ಅವರ ಬಳಿ ಬಂದು ಆಟೋಗ್ರಾಫ್ ಕೇಳಿ ನಂತರ ಅವರ ಕುತ್ತಿಗೆಯ ಎಡಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆಂದು ಬುಸಾನ್ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲೀ ಪಕ್ಕದಲ್ಲಿದ್ದ ಅವರ ಪಕ್ಷದ ಪ್ರಮುಖರು ತಕ್ಷಣ ದಾಳಿಕೋರನನ್ನು ಹಿಡಿದರು ಹಾಗು ನಂತರ ಪೊಲೀಸರು ಅಲ್ಲಿಗೆ ಧಾವಿಸಿ ಆತನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಸುಮಾರು 67 ವರ್ಷದ ಆರೋಪಿ ತಲೆಗೆ ಕಾಗದದ ಟೋಪಿ ಹಾಕಿದ್ದ ಹಾಗೂ ಅದರಲ್ಲಿ “ಐ ಯಾಮ್ ಲೀ ಜೇ-ಮಯುಂಗ್” ಎಂದು ಬರೆದಿದ್ದ. ಆತನನ್ನು ಜನರು ಬೆಂಬತ್ತುತ್ತಿರುವ ವೀಡಿಯೋ ಹರಿದಾಡುತ್ತಿದೆ.

ಅಪರಾಧವೆಸಗಲು ಚಾಕುವನ್ನು ಆನ್ಲೈನ್ ನಲ್ಲಿ ಖರೀದಿಸಿದ್ದಾಗಿ ಆತ ಹೇಳಿದ್ದಾನೆ. ದಾಳಿಯ ಉದ್ಧೇಶ ಇನ್ನಷ್ಟೇ ತಿಳಿದು ಬರಬೇಕಿದೆ.

ಲೀ ಅವರ ಪಕ್ಷ ಇದನ್ನೊಂದು ಉಗ್ರ ಕೃತ್ಯವೆಂದು ಬಣ್ಣಿಸಿದೆ ಹಾಗೂ ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯವೆಂದು ಹೇಳಿದೆ ಮತ್ತು ಕ್ಷಿಪ್ರ ತನಿಖೆಗೆ ಕೋರಿದೆ.

ಲೀ ಅವರ ಆರೋಗ್ಯ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ದ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯಿಯೋಲ್, ತನಿಖೆಗೆ ಆದೇಶಿಸಿದ್ದಾರೆ. 2022ರಲ್ಲಿ ಲೀ ಅವರು ಶೇ0.7 ಮತಗಳ ಅಂತರದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News