ಭಾರೀ ಚಂಡಮಾರುತ ಬೀಸುವ ಸಾಧ್ಯತೆ: ನಿರಾಶ್ರಿತರಿಗೆ ವಸತಿ ಕಲ್ಪಿಸಲು ಶಾಲೆಗೆ ರಜೆ ಸಾರಿದ ಆಡಳಿತ ಸಮಿತಿ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್ : ನಿರಾಶ್ರಿತರಿಗೆ ಶಾಲೆಯಲ್ಲಿ ವಸತಿ ಕಲ್ಪಿಸುವ ಅನಿವಾರ್ಯತೆಯಲ್ಲಿ ಶಾಲೆಯ ಮಕ್ಕಳಿಗೆ ರಜೆ ಘೋಷಿಸಿದ ಪ್ರಕರಣ ಅಮೆರಿಕದ ನ್ಯೂಯಾರ್ಕ್ ನಲ್ಲಿ ವರದಿಯಾಗಿದ್ದು ಆಡಳಿತ ಮಂಡಳಿಯ ಕ್ರಮಕ್ಕೆ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿದೆ.
ಭಾರೀ ಚಂಡಮಾರುತ ಬೀಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಫ್ಲಾಯ್ಡ್ ಬೆನ್ನೆಟ್ ಫೀಲ್ಡ್ ಪ್ರದೇಶದಿಂದ ಸುಮಾರು 2 ಸಾವಿರ ನಿರಾಶ್ರಿತರನ್ನು ನ್ಯೂಯಾರ್ಕ್ ನ ಜೇಮ್ಸ್ ಮ್ಯಾಡಿಸನ್ ಹೈಸ್ಕೂಲಿಗೆ ಸ್ಥಳಾಂತರಿಸಲಾಗುತ್ತಿದ್ದು ಅವರು ಶಾಲೆಯ ಆವರಣದಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳುತ್ತಾರೆ ಎಂದು ನ್ಯೂಯಾರ್ಕ್ ನಗರದ ಮೇಯರ್ ಎರಿಕ್ ಅಡಮ್ಸ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಲಾಡಳಿತ ಮಂಡಳಿ ಬುಧವಾರ ಶಾಲೆಗೆ ರಜೆ ಘೋಷಿಸಿತ್ತು.
ಈ ಕ್ರಮ ಸ್ವೀಕಾರಾರ್ಹವಲ್ಲ. ಶಾಲೆಗಳನ್ನು ಆಶ್ರಯ ತಾಣವಾಗಿ ಬಳಸಬಾರದು ಎಂದು ನ್ಯೂಯಾರ್ಕ್ ಸಿಟಿ ಆಡಳಿತ ಸಮಿತಿಯ ಸದಸ್ಯೆ ಇನಾ ವೆರ್ನಿಕೋವ್ ಆಗ್ರಹಿಸಿದ್ದಾರೆ.
`ಹೋಟೆಲ್ ಗಳಲ್ಲಿ ಜಾಗ ಇಲ್ಲದಾಗ ಶಾಲೆ. ಶಾಲೆಗಳಲ್ಲೂ ಜಾಗ ಸಾಲದಿದ್ದರೆ ಅವರು ನಿಮ್ಮ ಮನೆಗೂ ಬರಬಹುದು' ಎಂದು ಎಕ್ಸ್ (ಟ್ವಿಟರ್) ಅಧ್ಯಕ್ಷ ಎಲಾನ್ ಮಸ್ಕ್ ಟೀಕಿಸಿದ್ದಾರೆ.