ರಶ್ಯದಿಂದ ತೈಲ ಖರೀದಿಗೆ ಟ್ರಂಪ್ ವಿರೋಧವನ್ನು ಗಂಭೀರವಾಗಿ ಪರಿಗಣಿಸಿ: ಭಾರತಕ್ಕೆ ರಿಪಬ್ಲಿಕನ್ ನಾಯಕಿ ನಿಕಿ ಹ್ಯಾಲೆ ಎಚ್ಚರಿಕೆ
ನಿಕಿ ಹ್ಯಾಲೆ | PC : X \ @ivankanews5
ವಾಶಿಂಗ್ಟನ್, ಆ.24: ರಶ್ಯದಿಂದ ಭಾರತವು ತೈಲ ಖರೀದಿಸುತ್ತಿರುವುದಕ್ಕೆ ಸಂಬಂಧಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಭಾರತವು ಗಂಭೀರವಾಗಿ ಪರಿಗಣಿಸಬೇಕೆಂದು ಅಮೆರಿಕದ ರಿಪಬ್ಲಿಕನ್ ಪಕ್ಷದ ನಾಯಕಿ ನಿಕ್ಕಿ ಹ್ಯಾಲೆ ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಅಧೋಗತಿಗೆ ತಲುಪುತ್ತಿರುವ ಭಾರತ ಜೊತೆಗಿನ ಬಾಂಧವ್ಯವನ್ನು ಮೇಲ್ಮುಖಗೊಳಿಸುವುದೇ ಅಮೆರಿಕದ ಆದ್ಯತೆಯಾಗಬೇಕೆಂದು ಅವರು ಪ್ರತಿಪಾದಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಬಗ್ಗೆ ಮಾಡಿರುವ ಪೋಸ್ಟ್ ನಲ್ಲಿ ಅವರು ಭಾರತ-ಅಮೆರಿಕ ಪಾಲುದಾರಿಕೆಯ ಮಹತ್ವವನ್ನು ಒತ್ತಿಹೇಳಿದ್ದಾರೆ. ಜಗತ್ತಿನ ಎರಡು ಬೃಹತ್ ಪ್ರಜಾಪ್ರಭುತ್ವಗಳ ಸಮಾನಧ್ಯೇಯಗಳನ್ನು ಹೊಂದಿವೆಂದು ಅವರು ನೆನಪಿಸಿದ್ದಾರೆ.
‘‘ ರಶ್ಯ ತೈಲ (ಖರೀದಿ) ಬಗ್ಗೆ ಟ್ರಂಪ್ ಅವರ ವಾದವನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕು. ಈ ವಿಷಯದಲ್ಲಿ ಪರಿಹಾರವನ್ನು ಕಂಡುಕೊಳ್ಳಲು ಶ್ವೇತಭವನದ ಜೊತೆ ಎಷ್ಟು ಶೀಘ್ರ ಕಾರ್ಯೋನ್ಮುಖವಾಗುವುದೋ ಅಷ್ಟು ಒಳ್ಳೆಯದು ಎಂದು ಅವರು ಹೇಳಿದ್ದಾರೆ.
ಉಭಯದೇಶಗಳ ನಡುವಿನ ಗೆಳೆತನ ಹಾಗೂ ಸದ್ಭಾವನೆಯು, ಹಾಲಿ ಸವಾಲುಗಳನ್ನು ಎದುರಿಸಲು ಭದ್ರವಾದ ಬುನಾದಿಯಾಗಿದೆ ಎಂದು ಹ್ಯಾಲೆ ಹೇಳಿದರು.
ಚೀನಾವನ್ನು ಎದುರಿಸಲು ಅಮೆರಿಕಕ್ಕೆ ಭಾರತದ ಪಾಲುದಾರಿಕೆ ನಿರ್ಣಾಯಕವಾದುದಾಗಿದೆ ಎಂದರು ಅಭಿಪ್ರಾಯಿಸಿದ್ದಾರೆ.
ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದ ಬಿನ್ನಾಭಿಪ್ರಾಯಗಳು ಹಾಗೂ ಭಾರತದಿಂದ ರಶ್ಯದ ತೈಲ ಆಮದಿನನಂತಹ ವಿಷಯಗಳ ಕುರಿತಾಗಿ ಬಲವಾದ ಚರ್ಚೆ ನಡೆಯಬೇಕಾದ ಅಗತ್ಯವಿದೆ. ಆದರೆ ನಮ್ಮ ಸಮಾನ ಗುರಿಗಳ ಕುರಿತಾಗಿ ಉಭಯ ದೇಶಗಳು ದೂರದೃಷ್ಟಿಯನ್ನು ಕಳೆದುಕೊಳ್ಳಬಾರದು. ಚೀನಾವನ್ನು ಎದುರಿಸಬೇಕಾದರೆ ಅಮೆರಿಕಕ್ಕೆ ಭಾರತದ ಗೆಳೆತನ ಬೇಕಾಗುತ್ತದೆ ಎಂದು ಹ್ಯಾಲೆ ಹೇಳಿದರು.
ಭಾರತವನ್ನು ಅಮೆರಿಕವು ಮುಕ್ತ ಹಾಗೂ ಪ್ರಜಾತಾಂತ್ರಿಕ ಪಾಲುದಾರನಾಗಿ ಅಮೆರಿಕವು ನೋಡಬೇಕೇ ಹೊರತು ಚೀನಾದಂತೆ ವಿರೋಧಿಯನ್ನಾಗಿ ಅಲ್ಲವೆಂದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.