×
Ad

ನೊಬೆಲ್ ಶಾಂತಿ ಪ್ರಶಸ್ತಿಯನ್ನು ಟ್ರಂಪ್ ಗೆ ಅರ್ಪಿಸಿದ ಮರಿಯಾ ಮಚಾದೊ!

Update: 2025-10-10 23:51 IST

(ಫೋಟೋ - ndtv.com)

ಕಾರಕಸ್, ಅ.10: ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾದೊ ಅವರು ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನೆಜುವೆಲಾದ ಜನತೆಗೆ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅರ್ಪಿಸಿದ್ದಾರೆ.

“ನಾನು ಈ ಪ್ರಶಸ್ತಿಯನ್ನು ವೆನೆಜುವೆಲಾದ ಸಂತ್ರಸ್ತ ಜನರಿಗೆ ಮತ್ತು ನಮ್ಮ ಉದ್ದೇಶಕ್ಕೆ ನಿರ್ಣಾಯಕ ಬೆಂಬಲ ನೀಡಿದ ಅಧ್ಯಕ್ಷ ಟ್ರಂಪ್‌ಗೆ ಅರ್ಪಿಸುತ್ತೇನೆ” ಎಂದು ಮಚಾದೊ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

“ನಾವು ವಿಜಯದ ಅಂಚಿನಲ್ಲಿದ್ದೇವೆ. ಇಂದು, ಎಂದಿಗಿಂತಲೂ ಹೆಚ್ಚು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಸಾಧನೆಗಾಗಿ ಅಧ್ಯಕ್ಷ ಟ್ರಂಪ್, ಅಮೆರಿಕದ ಜನತೆ, ಲ್ಯಾಟಿನ್ ಅಮೆರಿಕದ ಕಳೆದ ಒಂದು ವರ್ಷದಿಂದ ಸರ್ವಾಧಿಕಾರಿ ಎಡಪಂಥೀಯ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಆಡಳಿತದ ವಿರುದ್ಧ ಅಡಗಿಕೊಂಡು ಹೋರಾಟ ನಡೆಸುತ್ತಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಮಚಾದೊ ಅವರ ಮೇಲೆ ನಿಷೇಧ ಹೇರಲಾಗಿದೆ. ಅವರು ತಮ್ಮ ಪರವಾಗಿ ಮಾಜಿ ರಾಜತಾಂತ್ರಿಕ ಎಡ್ಮಂಡೊ ಗೊನ್ಜಾಲೆಜ್ ಉರುಟಿಯಾ ಅವರನ್ನು ಬೆಂಬಲಿಸಿದ್ದರು. ಅಂತರರಾಷ್ಟ್ರೀಯ ಸಮುದಾಯದ ಬಹುಪಾಲು ಉರುಟಿಯಾರನ್ನೇ ನಿಜವಾದ ವಿಜೇತರೆಂದು ಪರಿಗಣಿಸಿದೆ.

ನೊಬೆಲ್ ಸಮಿತಿಯು ಮಚಾದೊ ಅವರ “ವೆನೆಜುವೆಲಾದ ಜನರ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸುವ ಹಾಗೂ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದತ್ತ ಶಾಂತಿಯುತ ಪರಿವರ್ತನೆಗಾಗಿ ಮಾಡಿದ ದಣಿವರಿಯದ ಹೋರಾಟ”ವನ್ನು ಉಲ್ಲೇಖಿಸಿ ಪ್ರಶಸ್ತಿಯನ್ನು ಘೋಷಿಸಿತ್ತು.

58 ವರ್ಷದ ಮಚಾಡೊ ಅವರು ಟ್ರಂಪ್ ಆಡಳಿತದ ಅವಧಿಯಲ್ಲಿ ಮಡುರೊ ವಿರುದ್ಧ ಕೈಗೊಳ್ಳಲಾದ ಮಿಲಿಟರಿ ಒತ್ತಡ ಮತ್ತು ಅಮೆರಿಕದ ನೌಕಾ ನಿಯೋಜನೆಗಳು ವೆನೆಜುವೆಲಾದ ಪ್ರಜಾಪ್ರಭುತ್ವ ಪರಿವರ್ತನೆಗೆ ಅಗತ್ಯ ಕ್ರಮಗಳಾಗಿವೆ ಎಂದು ಪ್ರಶಂಸಿಸಿದ್ದರು.

ಅಮೆರಿಕದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಮಚಾದೊ ಅವರ ಪೋಸ್ಟ್ ಅನ್ನು ಹಂಚಿಕೊಂಡು ಅವರನ್ನು ಅಭಿನಂದಿಸಿದ್ದಾರೆ.

ಇದೇ ವೇಳೆ, ಮಾಜಿ ಅಧ್ಯಕ್ಷೀಯ ಅಭ್ಯರ್ಥಿ ಹೆನ್ರಿಕ್ ಕ್ಯಾಪ್ರಿಲ್ಸ್ ಸೇರಿದಂತೆ ಅನೇಕ ವಿರೋಧ ಪಕ್ಷದ ನಾಯಕರು ಮಚಾದೊ ಅವರಿಗೆ ಶುಭಾಶಯ ಕೋರಿದ್ದಾರೆ.

“ಈ ಪ್ರಶಸ್ತಿ ನಮ್ಮ ಶಾಂತಿಯ ಹೋರಾಟಕ್ಕೆ ಮತ್ತೊಂದು ಪ್ರೇರಣೆಯಾಗಲಿ ಮತ್ತು ವೆನೆಜುವೆಲಾದ ಜನರಿಗೆ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವವನ್ನು ಮರಳಿ ತರುವ ದಾರಿಯಾಗಲಿ,” ಎಂದು ಕ್ಯಾಪ್ರಿಲ್ಸ್ ತಮ್ಮ ಪೋಸ್ಟ್‌ ನಲ್ಲಿ ಬರೆದಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News