×
Ad

ಫೆಲೆಸ್ತೀನ್ ನಿರಾಶ್ರಿತ ವಿಜ್ಞಾನಿ ಉಮರ್‌ಗೆ ನೊಬೆಲ್ ಪ್ರಶಸ್ತಿ

Update: 2025-10-09 10:44 IST

Photo | arabnews

ಸ್ಟಾಕ್‌ಹೋಮ್, ಅ.8: 2025ರ ಸಾಲಿನಲ್ಲಿ ರಸಾಯನ ಶಾಸ್ತ್ರದ ನೊಬೆಲ್ ಪಡೆದವರ ಪೈಕಿ ಒಬ್ಬರಾಗಿರುವ ಉಮರ್ ಮುವನ್ನಿಸ್ ಯಾಘಿ ಫೆಲೆಸ್ತೀನ್ ಮೂಲದ ಜೋರ್ಡಾನಿಯನ್-ಅಮೆರಿಕನ್ ರಸಾಯನ ವಿಜ್ಞಾನಿಯಾಗಿದ್ದಾರೆ.

ಅವರು ಪ್ರಸ್ತುತ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ರಸಾಯನ ಶಾಸ್ತ್ರದಲ್ಲಿ ನೀಲ್‌ಟ್ಯೆ ಟ್ರೆಟರ್ ಎಂಡೋಡ್ ಚೇರ್ ಹಾಗೂ ಪ್ರೊಫೆಸರ್ ಆಗಿದ್ದಾರೆ.

ಅವರ ಶೈಕ್ಷಣಿಕ ಸಾಧನೆಗಿಂತಲೂ ಹೆಚ್ಚಾಗಿ ಫೆಲೆಸ್ತೀನ್ ನಿರಾಶ್ರಿತನ ಹಿನ್ನೆಲೆಯಲ್ಲಿ ಅವರು ನಡೆಸಿದ ಹೋರಾಟ ಮತ್ತು ಮನೋದಾರ್ಢ್ಯತೆ ಗಮನ ಸೆಳೆಯುತ್ತದೆ.

ಯಾಘಿ 1965ರಲ್ಲಿ ಜೋರ್ಡಾನ್‌ನ ಅಮ್ಮಾನ್‌ನಲ್ಲಿ ಜನಿಸಿದರು. ಅವರು ಗಾಝಾ ಉಪಜಿಲ್ಲೆಯಲ್ಲಿರುವ ಅಲ್-ಮಸ್ಮಿಯ್ಯ ಎಂಬಲ್ಲಿಂದ ಬಂದ ನಿರಾಶ್ರಿತ ಕುಟುಂಬವೊಂದರಲ್ಲಿ ಬೆಳೆದರು. ಈ ಉಪಜಿಲ್ಲೆಯ ಜನರನ್ನು 1948ರಲ್ಲಿ ಒಕ್ಕಲೆಬ್ಬಿಸಲಾಗಿತ್ತು. ಅವರ ಬಾಲ್ಯದ ಜೀವನ ಕಷ್ಟಕರವಾಗಿತ್ತು. ಅವರು ತುಂಬಿ ತುಳುಕುತ್ತಿದ್ದ ಒಂದು ಕೋಣೆಯಲ್ಲಿ ಬೆಳೆದರು. ಇದೇ ಕೋಣೆಯಲ್ಲಿ ಕುಟುಂಬದ ಇತರ ಸದಸ್ಯರು ಮತ್ತು ಜಾನುವಾರುಗಳೂ ಇದ್ದವು. ಕುಟುಂಬಕ್ಕೆ ವಿದ್ಯುತ್ ಇರಲಿಲ್ಲ. ಶುದ್ಧ ಕುಡಿಯುವ ನೀರು ಕೂಡ ಇರಲಿಲ್ಲ.

15ನೇ ವಯಸ್ಸಿನಲ್ಲಿ ಅವರು ಶಿಕ್ಷಣ ಮತ್ತು ಅವಕಾಶ ಅರಸಿ ಅಮೆರಿಕಕ್ಕೆ ಹೋದರು. ಅಲ್ಲಿನ ಹಡ್ಸನ್ ವ್ಯಾಲಿ ಕಮ್ಯುನಿಟಿ ಕಾಲೇಜಿನಲ್ಲಿ ಶಿಕ್ಷಣ ಆರಂಭಿಸಿದರು. ಅವರು ನ್ಯೂಯಾರ್ಕ್ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದರು.

1990ರಲ್ಲಿ ಇಲಿನಾಯಿಸ್ ವಿಶ್ವವಿದ್ಯಾನಿಲಯದಿಂದ ರಸಾಯನ ಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದ ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ (1990-92)ರಲ್ಲಿ ಪೋಸ್ಟ್ ಡಾಕ್ಟೋರಲ್ ರಿಸರ್ಚ್ ಮಾಡಿದರು.

ಅವರು ಅರಿರೆನ ಸ್ಟೇಟ್ ವಿಶ್ವವಿದ್ಯಾನಿಲಯದಲ್ಲಿ 1992ರಿಂದ 1998ರವರೆಗೆ ಸಹಾಯಕ ಪ್ರೊಫೆಸರ್ ಆಗಿದ್ದರು. ಬಳಿಕ 1996ರಿಂದ 2006ರವರೆಗೆ ಮಿಶಿಗನ್ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆದರು.

2025ರಲ್ಲಿ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯು ಅವರನ್ನು ಯುನಿವರ್ಸಿಟಿ ಪ್ರೊಫೆಸರ್ ದರ್ಜೆಗೆ ಏರಿಸಿತು.

ರೆಟಿಕ್ಯುಲರ್ ಕೆಮಿಸ್ಟ್ರಿ ಎಂಬ ಹೊಸ ಸಂಶೋಧನಾ ಕ್ಷೇತ್ರವನ್ನು ಬೆಳೆಸಿದ ಕೀರ್ತಿ ಉಮರ್ ಯಾಘಿ ಅವರಿಗೆ ಸಲ್ಲುತ್ತದೆ. ಜಗತ್ತಿನ ಬಹುದೊಡ್ಡ ಸಮಸ್ಯೆಗಳಾದ ಹವಾಮಾನ ಬದಲಾವಣೆ, ಇಂಗಾಲ ಹೆಚ್ಚಳ ಮತ್ತು ಶುದ್ಧ ನೀರಿನ ಕೊರತೆ ನೀಗಿಸಲು ಸಹಾಯ ಮಾಡುವ ಅದ್ಭುತ ಸಂಶೋಧನೆ ಮೆಟಲ್-ಆರ್ಗಾನಿಕ್ ಫ್ರೇಮ್ವರ್ಕ್ಸ್ ಅನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಅವರಿಗೆ ಈ ಪ್ರತಿಷ್ಠಿತ ಜಾಗತಿಕ ಪ್ರಶಸ್ತಿ ಲಭಿಸಿದೆ.

ತಮ್ಮ ಪೋಷಕರ ಸಂಘರ್ಷದ ಜೀವನವೇ ಅವರಿಗೆ ದೊಡ್ಡ ಪ್ರೇರಣೆಯಾಗಿತ್ತು. ಫೆಲೆಸ್ತೀನ್ ನಿರಾಶ್ರಿತ ಕುಟುಂಬದಲ್ಲಿ ಬೆಳೆದು, ಇಂದು ಜಗತ್ತಿನ ಅತ್ಯುನ್ನತ ಗೌರವವಾದ ನೊಬೆಲ್ ಪ್ರಶಸ್ತಿಯನ್ನು ಪಡೆದಿರುವ ಓಮರ್ ಯಾಘಿ ಅವರು, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕನಸು ಕಾಣಬಹುದು ಮತ್ತು ಅದನ್ನು ನನಸಾಗಿಸಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಅವರಿಗೆ ಸೌದಿ ಅರೇಬಿಯಾದ ಪೌರತ್ವ ಕೂಡಾ ಇದೆ. ನೊಬೆಲ್ ಗೂ ಮೊದಲು ಉಮರ್ ಅವರಿಗೆ ಹತ್ತಾರು ಪ್ರತಿಷ್ಠಿತ ಪ್ರಶಸ್ತಿಗಳು, ಗೌರವಗಳು, ಫೆಲೋಶಿಪ್ ಗಳು ಸಿಕ್ಕಿವೆ.

ಒಂದು ಯುದ್ಧಪೀಡಿತ ಪ್ರದೇಶದಿಂದ ಬಂದ ಬಡ ಕುಟುಂಬದ ಮಗ ಇಂದು ಇಡೀ ಜಗತ್ತಿಗೆ ಉಪಯುಕ್ತವಾದ ಆವಿಷ್ಕಾರವನ್ನು ನೀಡಿ ಅತ್ಯುನ್ನತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News