ಶೆಹಬಾಝ್ ಷರೀಫ್ , ಡೊನಾಲ್ಡ್ ಟ್ರಂಪ್ , ನವಿ ಪಿಳ್ಳೈ | PTI

ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರಿಗೆ ನಿರಾಸೆಯಾಗಿದೆ. 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ದಕ್ಷಿಣ ಆಫ್ರಿಕಾದ ಕಾನೂನು ತಜ್ಞೆ ನವಿ ಪಿಳ್ಳೈ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಘೋಷಣೆಯ ಬೆನ್ನಲ್ಲೇ ಟ್ರಂಪ್ ಕುರಿತು ಪಿಳ್ಳೈಯವರು ವ್ಯಂಗ್ಯವಾಗಿ ಹೇಳಿದ್ದು ಗಮನ ಸೆಳೆದಿದೆ.

ಟ್ರಂಪ್ ಅವರಿಗೆ ಪ್ರಶಸ್ತಿ ಸಿಗುವ ನಿರೀಕ್ಷೆ ವ್ಯಕ್ತಪಡಿಸಿದ್ದ ಷರೀಫ್, ಪಾಕಿಸ್ತಾನವು ಅವರನ್ನು ನಾಮನಿರ್ದೇಶನ ಮಾಡಿದೆ ಮತ್ತು ಈ ಬಾರಿ ಅವರಿಗೆ ಅರ್ಹ ಮನ್ನಣೆ ದೊರೆಯಲಿದೆ ಎಂದು ಹೇಳಿದ್ದರು. ಆದರೆ, ನಾರ್ವೆಯ ನೊಬೆಲ್ ಸಮಿತಿಯು ಪಿಳ್ಳೈ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.

ಪ್ರಶಸ್ತಿ ಘೋಷಣೆಯ ಬಳಿಕ ತಮಗೆ ಅಭಿನಂದನೆ ಸಲ್ಲಿಸುತ್ತಿದ್ದವರ ಚಪ್ಪಾಳೆಯನ್ನು ಉಲ್ಲೇಖಿಸಿದ 85 ವರ್ಷದ ಪಿಳ್ಳೈ, “ನೀವು ಇನ್ನೂ ಸ್ವಲ್ಪ ಜೋರಾಗಿ ಚಪ್ಪಾಳೆ ತಟ್ಟಿದರೆ, ಈ ಪ್ರಶಸ್ತಿಯನ್ನು ಟ್ರಂಪ್ ಅವರೊಂದಿಗೆ ಹಂಚಿಕೊಳ್ಳಬಹುದು!” ಎಂದು ಹಾಸ್ಯ ಮಾಡಿದರು.

ಆಮ್ನೆಸ್ಟಿ ಇಂಟರ್ನ್ಯಾಷನಲ್ ನ ಪ್ರಧಾನ ಕಾರ್ಯದರ್ಶಿ ಪ್ರಕಟಿಸಿದ ವಿಡಿಯೊದಲ್ಲಿ ಅವರ ಈ ಮಾತು ದಾಖಲಾಗಿದೆ. ಕಳೆದ ವರ್ಷದ ಪ್ರಶಸ್ತಿ ವಿಜೇತೆ ಹಾಗೂ ವೆನೆಝುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರು ಟ್ರಂಪ್ ಜತೆ ಪ್ರಶಸ್ತಿಯನ್ನು ಹಂಚಿಕೊಳ್ಳುವ ಕುರಿತು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಟ್ರಂಪ್ ಅವರು ತಮ್ಮ 'ಟ್ರೂತ್ ಸೋಶಿಯಲ್' ವೇದಿಕೆಯಲ್ಲಿ ವಕೀಲರೊಬ್ಬರ ಪೋಸ್ಟ್ ಹಂಚಿಕೊಂಡರು. ಆ ಪೋಸ್ಟ್ನಲ್ಲಿ ಪಿಳ್ಳೈ ಅವರನ್ನು 'ದ್ವೇಷಿ' ಎಂದು ಕರೆಯಲಾಗಿತ್ತು ಮತ್ತು ಅವರ ಆಯ್ಕೆಯಿಂದ ಪ್ರಶಸ್ತಿಯ ಘನತೆಗೆ ಧಕ್ಕೆಯಾಗಿದೆ ಎಂದು ಹೇಳಲಾಗಿತ್ತು.

ಈ ಹಿಂದೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದ ಟ್ರಂಪ್, ಬಳಿಕ ತಮಗೆ ಈ ಗೌರವ ಒಂದು ರೀತಿಯಲ್ಲಿ ಈಗಾಗಲೇ ದೊರೆತಿದೆ ಎಂದು ಹೇಳಿಕೊಂಡಿದ್ದರು. 2025ರ ಪ್ರಶಸ್ತಿ ಪುರಸ್ಕೃತೆ ಮಚಾದೊ ಅವರು ಜನವರಿಯಲ್ಲಿ ಶ್ವೇತಭವನದಲ್ಲಿ ತಮ್ಮ ಪದಕವನ್ನು ಟ್ರಂಪ್ ಅವರಿಗೆ ನೀಡಿದ್ದರು.

“ಅಧ್ಯಕ್ಷ ಟ್ರಂಪ್ ಗಿಂತ ಹೆಚ್ಚು ಈ ಗೌರವಕ್ಕೆ ಅರ್ಹರಾದವರು ಇತಿಹಾಸದಲ್ಲಿ ಯಾರೂ ಇಲ್ಲ ಎಂದು ಹೇಳಿದ ಪ್ರಶಸ್ತಿ ಪುರಸ್ಕೃತರಿಂದ ಕಳೆದ ಬಾರಿ ಇದನ್ನು ಪರೋಕ್ಷವಾಗಿ ಸ್ವೀಕರಿಸಲು ನನಗೆ ಅತ್ಯಂತ ಗೌರವವೆನಿಸಿತು” ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದರು.

ಆದರೆ, ಒಮ್ಮೆ ಪ್ರಶಸ್ತಿ ಘೋಷಿಸಿದ ಬಳಿಕ ಅದನ್ನು ಬೇರೆಯವರಿಗೆ ವರ್ಗಾಯಿಸಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ನೊಬೆಲ್ ಸಮಿತಿ ಸ್ಪಷ್ಟಪಡಿಸಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ತಾನು ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್ ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ, ಈ ಹೇಳಿಕೆಯನ್ನು ಭಾರತ ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ.

ತಮ್ಮ 'X' ಖಾತೆಯಲ್ಲಿ ಶೆಹಬಾಝ್ ಷರೀಫ್, “ದಕ್ಷಿಣ ಏಷ್ಯಾದಲ್ಲಿ ಶಾಂತಿಯನ್ನು ಉತ್ತೇಜಿಸುವಲ್ಲಿ ಟ್ರಂಪ್ ಐತಿಹಾಸಿಕ ಪಾತ್ರ ವಹಿಸಿದ್ದಾರೆ. ಅವರ ಸಮಯೋಚಿತ ಮಧ್ಯಪ್ರವೇಶವು ಪಾಕಿಸ್ತಾನ ಮತ್ತು ಭಾರತವನ್ನು ಸಂಘರ್ಷದ ಅಂಚಿನಿಂದ ಹಿಂದಕ್ಕೆ ಕರೆತರಲು ಹಾಗೂ ಕದನ ವಿರಾಮವನ್ನು ಖಚಿತಪಡಿಸಿಕೊಳ್ಳಲು ನೆರವಾಯಿತು” ಎಂದು ಪ್ರತಿಪಾದಿಸಿದ್ದರು.

ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು 2025ರ ಮೇ ತಿಂಗಳಲ್ಲಿ 'ಆಪರೇಷನ್ ಸಿಂಧೂರ್' ಆರಂಭಿಸಿತ್ತು. ಬಳಿಕ ಉದ್ವಿಗ್ನತೆಯನ್ನು ಕೊನೆಗೊಳಿಸುವಲ್ಲಿ ಯಾವುದೇ ಮೂರನೇ ವ್ಯಕ್ತಿಯ ಪಾತ್ರವಿರಲಿಲ್ಲ ಎಂದು ಭಾರತ ಹೇಳುತ್ತಲೇ ಬಂದಿದೆ.

2025ರ ಮೇ 13ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಮೂರನೇ ಪಕ್ಷದ ಹಸ್ತಕ್ಷೇಪವಿಲ್ಲದೆ ನೇರವಾಗಿ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು ಎಂದು ಹೇಳಿದ್ದರು.

ಒಂದು ತಿಂಗಳ ಬಳಿಕ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು, ಪಾಕಿಸ್ತಾನದ ಮನವಿಯ ಮೇರೆಗೆ ಭಾರತ ಕದನ ವಿರಾಮಕ್ಕೆ ಒಪ್ಪಿಕೊಂಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಜತೆಗಿನ ದೂರವಾಣಿ ಸಂಭಾಷಣೆಯಲ್ಲಿ ತಿಳಿಸಿದ್ದರು ಎಂದು ಹೇಳಿದ್ದರು. ಭಾರತವು ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲ ಮತ್ತು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂಬ ನಿಲುವನ್ನು ಮೋದಿ ಸ್ಪಷ್ಟಪಡಿಸಿದ್ದರು ಎಂದು ಸರಕಾರ ತಿಳಿಸಿದೆ.

2025ರ ಮೇ ತಿಂಗಳಿನಿಂದ ತಮ್ಮ ಮಧ್ಯಸ್ಥಿಕೆಯ ಕುರಿತು ಟ್ರಂಪ್ ಸುಮಾರು 80 ಬಾರಿ ಹೇಳಿಕೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

“ಶಾಂತಿ ಮತ್ತು ಅಂತರರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ಪ್ರಯತ್ನಗಳಿಗಾಗಿ” ನವಿ ಪಿಳ್ಳೈ ಅವರಿಗೆ 2026ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ.

ಯುದ್ಧಾಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ನರಮೇಧದಂತಹ ಕೃತ್ಯಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸುವುದನ್ನು ಖಚಿತಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ನೊಬೆಲ್ ಸಮಿತಿ ತಿಳಿಸಿದೆ.

ಭಾರತೀಯ ಮೂಲದ ಪಿಳ್ಳೈ, ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ (ICC) ಮಾಜಿ ನ್ಯಾಯಾಧೀಶೆಯಾಗಿದ್ದರು. ಬಳಿಕ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉನ್ನತ ಆಯುಕ್ತೆಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ICCಯಲ್ಲಿ ಕಾನೂನು ತಜ್ಞೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೆಲ್ಸನ್ ಮಂಡೇಲಾ ಮತ್ತು ವರ್ಣಭೇದ ನೀತಿ ವಿರೋಧಿ ಹೋರಾಟಗಾರರ ಪರವಾಗಿಯೂ ವಕೀಲೆಯಾಗಿ ಕೆಲಸ ಮಾಡಿದ್ದಾರೆ.

12 ಮಿಲಿಯನ್ ಸ್ವೀಡಿಷ್ ಕ್ರೌನ್ ಗಳ (ಸುಮಾರು 1.2 ಮಿಲಿಯನ್ ಅಮೆರಿಕನ್ ಡಾಲರ್) ಮೌಲ್ಯದ ಪ್ರಶಸ್ತಿಯನ್ನು ಡಿಸೆಂಬರ್ 10ರಂದು ನಾರ್ವೆಯ ಓಸ್ಲೊದಲ್ಲಿ ಪ್ರದಾನ ಮಾಡಲಾಗುತ್ತದೆ.

ನೊಬೆಲ್ ಶಾಂತಿ ಪ್ರಶಸ್ತಿಗೆ ರಾಷ್ಟ್ರೀಯ ಸರಕಾರಗಳು ಮತ್ತು ಸಂಸತ್ತುಗಳ ಸದಸ್ಯರು, ರಾಷ್ಟ್ರಗಳ ಮುಖ್ಯಸ್ಥರು, ಅಂತರರಾಷ್ಟ್ರೀಯ ನ್ಯಾಯಾಲಯಗಳ ನ್ಯಾಯಾಧೀಶರು, ನಿರ್ದಿಷ್ಟ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಶಾಂತಿ ಮತ್ತು ವಿದೇಶಾಂಗ ನೀತಿ ಸಂಸ್ಥೆಗಳ ನಿರ್ದೇಶಕರು ಹಾಗೂ ಹಿಂದಿನ ಪ್ರಶಸ್ತಿ ವಿಜೇತರು ನಾಮನಿರ್ದೇಶನ ಮಾಡಬಹುದು. ಸ್ವಯಂ ನಾಮನಿರ್ದೇಶನಗಳಿಗೆ ಅವಕಾಶವಿಲ್ಲ.

ಟ್ರಂಪ್ ಅವರನ್ನು ಪ್ರಶಸ್ತಿಗೆ ನಾಮನಿರ್ದೇಶನ ಮಾಡಿರುವುದಾಗಿ ಪಾಕಿಸ್ತಾನ ಕಳೆದ ವರ್ಷ ಹಲವು ಬಾರಿ ಘೋಷಿಸಿತ್ತು. ಕಾಂಬೋಡಿಯಾ ಮತ್ತು ಇಸ್ರೇಲ್ ನ ನಾಯಕರು ಕೂಡ ಅವರನ್ನು ನಾಮನಿರ್ದೇಶನ ಮಾಡಿರುವುದಾಗಿ ಹೇಳಿದ್ದರು.

ಈ ವರ್ಷ 287 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ 208 ವ್ಯಕ್ತಿಗಳು ಮತ್ತು 79 ಸಂಸ್ಥೆಗಳು ಸೇರಿವೆ. ನಾಮನಿರ್ದೇಶನ ಪ್ರಕ್ರಿಯೆ ಜನವರಿ 31ರಂದು ಕೊನೆಗೊಳ್ಳುತ್ತದೆ. ಬಳಿಕ ನಾರ್ವೆಯ ಸಂಸತ್ತು ನೇಮಿಸಿದ ಐವರು ಸದಸ್ಯರ ಸಮಿತಿಯು ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುತ್ತದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor