Photo Credit : PTI

ರಿಯಾದ್: ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ತುರ್ಕಿಯೆ ನಡುವಿನ `ಮಕ್ಕಾ ರಕ್ಷಣಾ ಒಪ್ಪಂದ' ಜಾರಿಯಾದ ಬೆನ್ನಲ್ಲೇ, ಸೌದಿಯಲ್ಲಿ ಪಾಕಿಸ್ತಾನ ಸೇನೆಯ ಪಾತ್ರವು ಕೇವಲ ರಕ್ಷಣಾತ್ಮಕ ಬೆಂಬಲಕ್ಕೆ ಸೀಮಿತವಾಗದೆ ಮತ್ತಷ್ಟು ವಿಸ್ತರಿಸಿದೆ. ಇರಾನ್ ಬೆಂಬಲಿತ ಯಮನ್‍ನ ಹೌತಿ ಪಡೆಗಳ ಮೇಲೆ ಪಾಕಿಸ್ತಾನದ ಫೈಟರ್ ಜೆಟ್‍ಗಳನ್ನು ಬಳಸಿ ದಾಳಿ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.

ಪಾಕಿಸ್ತಾನದ ಫೈಟರ್ ಜೆಟ್‍ಗಳು ಯಮನ್‍ನಲ್ಲಿ ಹೌತಿಗಳ ಮೇಲೆ ದಾಳಿ ನಡೆಸಿವೆ. ಅಕ್ಟೋಬರ್ 8 ರಂದು ಅನ್ಸಾರುಲ್ಲಾ ನೇತೃತ್ವದ ಬಂಡುಕೋರ ಪಡೆಗಳ ಮೇಲಿನ ದಾಳಿಯಲ್ಲಿ ಪಾಕಿಸ್ತಾನ ವಾಯುಪಡೆಯ ಜೆಟ್‍ಗಳು ಭಾಗವಹಿಸಿದ್ದವು ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ವರದಿಗಳ ಪ್ರಕಾರ, ಪಾಕಿಸ್ತಾನವು ರಕ್ಷಣಾತ್ಮಕ ಬೆಂಬಲದ ಹಂತವನ್ನು ದಾಟಿ ನೇರ ಯುದ್ಧ ಕಾರ್ಯಾಚರಣೆಗೆ ಇಳಿದಿದ್ದು ಸುಮಾರು 8,000 ಪಾಕಿಸ್ತಾನದ ಸೈನಿಕರನ್ನು ಸೌದಿ ಅರೇಬಿಯಾದಲ್ಲಿ ನಿಯೋಜಿಸಲಾಗಿದೆ. ತುರ್ಕಿಯೆ ದೇಶದ ಮಿಲಿಟರಿಯನ್ನೂ ಸೌದಿ ಅರೇಬಿಯಾಕ್ಕೆ ನಿಯೋಜಿಸಲಾಗಿದೆ. ಪಾಕಿಸ್ತಾನವು ಸೌದಿ ಅರೇಬಿಯಾದ ಒಳಗಿನ ಪ್ರಾದೇಶಿಕ ರಕ್ಷಣೆ ಮತ್ತು ಮಿಲಿಟರಿ ಬೆಂಬಲದ ಮೇಲೆ ಗಮನ ಹರಿಸಿದರೆ, ತುರ್ಕಿಯೆ ಕಣ್ಗಾವಲು, ವಾಯು ರಕ್ಷಣೆ ಮತ್ತು ಡ್ರೋನ್‍ಗಳಂತಹ ತಾಂತ್ರಿಕ ಸಾಮರ್ಥ್ಯಗಳನ್ನು ಒದಗಿಸುತ್ತದೆ. ತುರ್ಕಿಯೆ 200ಕ್ಕೂ ಹೆಚ್ಚು ಮಿಲಿಟರಿ ಸಿಬ್ಬಂದಿ, ಭಾರಿ ಪ್ರಮಾಣದ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳು ಹಾಗೂ ನೆಲ ಮತ್ತು ವಾಯು ರಕ್ಷಣಾ ಕ್ಷಿಪಣಿಗಳನ್ನು ಸೌದಿ ಅರೇಬಿಯಾಕ್ಕೆ ವರ್ಗಾಯಿಸಿದೆ. ಸೌದಿ ಬೆಂಬಲಿತ ಬಣದ ಪರವಾಗಿ ಹೋರಾಡಲು ನೂರಾರು ಸಿರಿಯನ್ ಸೇನಾ ಯೋಧರನ್ನು ಯಮನ್‍ನಲ್ಲಿ ನಿಯೋಜಿಸಲಾಗಿದೆ ಎಂದೂ ವರದಿ ತಿಳಿಸಿದೆ.

ಮೂವರು ಸೌದಿ ಪ್ರಜೆಗಳು ಮೃತ್ಯು

ಸೌದಿ ಅರೇಬಿಯಾದ ಕಿಂಗ್ ಖಾಲಿದ್ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸೌದಿಯಾ ವಿಮಾನವನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ವಿಮಾನದ ಪೈಲಟ್ ಸೇರಿದಂತೆ ಮೂವರು ಸೌದಿ ಪ್ರಜೆಗಳು ಮೃತಪಟ್ಟಿದ್ದಾರೆ . ದಾಳಿಯಲ್ಲಿ ವಿವಿಧ ದೇಶಗಳ ಹಲವು ಜನರು ಗಾಯಗೊಂಡಿದ್ದಾರೆ ಎಂದು ಸೌದಿಯ ನಾಗರಿಕ ವಿಮಾನಯಾನ ಪ್ರಾಧಿಕಾರ ಶುಕ್ರವಾರ ತಿಳಿಸಿದೆ.

ಗುರುವಾರ ನಡೆದ ಮೊದಲ ದಾಳಿಯು ವಿಮಾನ ನಿಲ್ದಾಣದ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದ್ದರೆ, ಎರಡನೇ ದಾಳಿಯು ವಿಮಾನಕ್ಕೆ ಅಪ್ಪಳಿಸಿತು ಎಂದು ವರದಿಯಾಗಿದೆ. ಈ ದಾಳಿಗೆ ಯಾರು ಹೊಣೆ ಎಂಬುದನ್ನು ಸೌದಿ ಸ್ಪಷ್ಟಪಡಿಸಿಲ್ಲವಾದರೂ, ಬಾಲಿಸ್ಟಿಕ್ ಕ್ಷಿಪಣಿಯ ಮೂಲಕ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡಿರುವುದಾಗಿ ಹೂತಿಗಳು ಹೇಳಿಕೊಂಡಿದ್ದಾರೆ.

ಮೃತರ ಪೈಕಿ ಕ್ಯಾಪ್ಟನ್ ಹಮೂದ್ ಅಲಿ ಅಲ್ಕಲ್ಥಾಮಿ ಸೇರಿದ್ದಾರೆ. ತನ್ನ ಒಂದು ವಿಮಾನವು ನೆಲದ ಮೇಲಿದ್ದಾಗ ಹಾನಿಗೊಳಗಾಗಿದೆ ಮತ್ತು ಆ ಸಮಯದಲ್ಲಿ ಯಾವುದೇ ಪ್ರಯಾಣಿಕರು ವಿಮಾನದಲ್ಲಿರಲಿಲ್ಲ. ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಸಾಮಾನ್ಯ ಸ್ಥಿತಿಗೆ ಮರಳಿವೆ ಎಂದು ಸೌದಿಯ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor