ಅಣ್ವಸ್ತ್ರ ಒಪ್ಪಂದ ಮಾತುಕತೆ: ಟ್ರಂಪ್ ಪ್ರಸ್ತಾವಕ್ಕೆ ಇರಾನ್ ತಿರಸ್ಕಾರ
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ PC: x.com/htTweets
ಟೆಹರಾನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ವಿರುದ್ಧ "ಗರಿಷ್ಠ ಒತ್ತಡ" ಅಭಿಯಾನವನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಆಪಾದಿಸಿ, ಆ ದೇಶದ ಜತೆಗೆ ಅಣ್ವಸ್ತ್ರ ಮಾತುಕತೆಯನ್ನು ಪುನರಾರಂಭಿಸುವ ಪ್ರಸ್ತಾವವನ್ನು ಇರಾನ್ ಶುಕ್ರವಾರ ತಳ್ಳಿಹಾಕಿದೆ.
ಇದಕ್ಕೂ ಮುನ್ನ ಟ್ರಂಪ್ ಇರಾನ್ ಗೆ ಪತ್ರ ಬರೆದು, ಇರಾನ್ ಮುಖಂಡರು ಮಾತುಕತೆಗೆ ಮುಂದಾಗಬೇಕು ಇಲ್ಲವೇ ಮಿಲಿಟರಿ ದಾಳಿ ಎದುರಿಸಲು ಸಜ್ಜಾಗಬೇಕು ಎಂದು ಹೇಳಿದ್ದರು. "ಅವರಿಗೆ ನಾವು ಪತ್ರ ಬರೆದು ಅವರು ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದೆವು. ಏಕೆಂದರೆ ನಾವು ಮಿಲಿಟರಿ ದಾಳಿ ನಡೆಸಿದರೆ ಅವರ ಪಾಲಿಗೆ ಅದು ಭಯಾನಕವಾಗಲಿದೆ" ಎಂದು ಟ್ರಂಪ್ ಫಾಕ್ಸ್ ಬ್ಯುಸಿನೆಸ್ ಜತೆ ಮಾತನಾಡಿದ ವೇಳೆ ಸ್ಪಷ್ಟಪಡಿಸಿದ್ದರು.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಎಎಫ್ಪಿ ಜತೆ ಮಾತನಾಡಿ, ಜಂಟಿ ಸಮಗ್ರ ಕ್ರಿಯಾ ಯೋಜನೆ ಒಪ್ಪಂದದ ಬಗ್ಗೆ ಇತರ ಸಂಧಾನಕಾರರ ಸಂಪರ್ಕವನ್ನು ಇರಾನ್ ಮುಂದುವರಿಯಲಿದೆ. ಆದರೆ ಟ್ರಂಪ್ ನಮ್ಮ ಮೇಲೆ ಆರ್ಥಿಕ ನಿರ್ಬಂಧ ವಿಧಿಸುವ ನಿರ್ಧಾರವನ್ನು ಪುನರುಚ್ಚರಿಸಿದರೆ ಆ ದೇಶದ ಜತೆಗೆ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
"ಗರಿಷ್ಠ ಒತ್ತಡ ನೀತಿಯನ್ನು ಅನುಸರಿಸುವವರೆಗೂ ಅಮೆರಿಕದ ಜತೆ ಯಾವುದೇ ನೇರ ಮಾತುಕತೆಗೆ ನಾವು ಮುಂದಾಗುವುದಿಲ್ಲ. ಆದರೆ ಇತರ ದೇಶಗಳ ಜತೆ ಒಪ್ಪಂದ ಮಾತುಕತೆ ನಡೆಸುವುದಿಲ್ಲ ಎಂಬ ಅರ್ಥವಲ್ಲ. ಮೂರು ಯೂರೋಪಿಯನ್ ದೇಶಗಳ ಜತೆ ನಾವು ಮಾತುಕತೆ ನಡೆಸುತ್ತಿದ್ದೇವೆ ಹಾಗೂ ರಷ್ಯಾ, ಚೀನಾ ಸೇರಿ ಹಲವು ಜೆಸಿಪಿಓಎ ದೇಶಗಳ ಜತೆ ಒಪ್ಪಂದ ಮಾತುಕತೆ ನಡೆಯುತ್ತಿದೆ. ಈ ಮಾತುಕತೆ ಮುಂದುವರಿಯಲಿದ್ದು, ಇದು ಫಲಿತಾಂಶ ನೀಡುವ ಪಥದಲ್ಲಿ ನಾವಿದ್ದೇವೆ" ಎಂದು ವಿವರಿಸಿದ್ದಾರೆ.
"ಅಮೆರಿಕ ಒತ್ತಡ ತಂತ್ರ ಅನುಸರಿಸುವವರೆಗೂ ನಾವು ಕೂಡಾ ಪ್ರತಿರೋಧ ವ್ಯಕ್ತಪಡಿಸುತ್ತೇವೆ" ಎಂದು ಹೇಳಿದರು.