ಒಬಾಮಾ ಏನೂ ಮಾಡದೇ ನೊಬೆಲ್ ಶಾಂತಿ ಪ್ರಶಸ್ತಿ ಪಡೆದರು, ನಾನು 8 ಯುದ್ಧಗಳನ್ನು ಅಂತ್ಯಗೊಳಿಸಿದ್ದೇನೆ: ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಶಿಂಗ್ಟನ್: ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ವಿರುದ್ಧ ವಾಗ್ದಾಳಿ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಅವರು ಏನೂ ಮಾಡದೆ, ನಮ್ಮ ದೇಶವನ್ನು ನಾಶಗೊಳಿಸಿದ್ದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದರು. ಆದರೆ, ನಾನು ಎಂಟು ಯುದ್ಧಗಳನ್ನು ಅಂತ್ಯಗೊಳಿಸಿದ್ದೇನೆ” ಎಂದು ಹೇಳುವ ಮೂಲಕ, ನೊಬೆಲ್ ಶಾಂತಿ ಪ್ರಶಸ್ತಿಗೆ ಪರೋಕ್ಷವಾಗಿ ಮತ್ತೆ ಪಟ್ಟು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್, “ಬರಾಕ್ ಒಬಾಮಾ ಉತ್ತಮ ಅಧ್ಯಕ್ಷರಾಗಿರಲಿಲ್ಲ” ಎಂದು ಟೀಕಾಪ್ರಹಾರ ನಡೆಸಿದರಲ್ಲದೆ, “ನಾನು ಗಾಝಾ ಶಾಂತಿ ಒಪ್ಪಂದವನ್ನು ಏರ್ಪಡಿಸಿದ್ದು, ಎಂಟು ಯುದ್ಧಗಳನ್ನು ಅಂತ್ಯಗೊಳಿಸಿದ್ದೇನೆ. ಆದರೆ, ನಾನು ಪ್ರಶಸ್ತಿಗಳಿಗಾಗಿ ಈ ಕೆಲಸ ಮಾಡಿಲ್ಲ” ಎಂದು ಒತ್ತಿ ಹೇಳಿದ್ದಾರೆ. ಬರಾಕ್ ಒಬಾಮಾ ಅಧ್ಯಕ್ಷರಾದ ಕೆಲವೇ ತಿಂಗಳಲ್ಲಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಅವರು ತಾವೇನೂ ಮಾಡದೆ ಅದನ್ನು ಪಡೆದರು ಹಾಗೂ ಅದು ತನಗೇಕೆ ಬಂದಿತು ಎಂಬುದೂ ಅವರಿಗೆ ತಿಳಿದಿಲ್ಲ. ಅವರು ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾದರು ಹಾಗೂ ಏನನ್ನೂ ಮಾಡದಿದ್ದರೂ, ನಮ್ಮ ದೇಶವನ್ನು ನಾಶಗೊಳಿಸಿದ್ದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದರು” ಎಂದು ಅವರು ಆಕ್ರೋಶ ವ್ಯಕ್ತವಾಗಿದೆ.
2009ರಲ್ಲಿ ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಒಂಬತ್ತು ತಿಂಗಳ ನಂತರ, ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿತ್ತು. “ಬರಾಕ್ ಒಬಾಮಾ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಬಲವರ್ಧನೆ ಮತ್ತು ಜನರ ನಡುವಿನ ಸಹಕಾರಕ್ಕೆ ಅಸಾಧಾರಣ ಪ್ರಯತ್ನ ನಡೆಸಿದ್ದಾರೆ” ಎಂದು ನಾರ್ವೆಯ ನೊಬೆಲ್ ಸಮಿತಿ ಈ ವೇಳೆ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತ್ತು.