×
Ad

ಆಪರೇಷನ್ ಮಿಡ್‌ನೈಟ್ ಹ್ಯಾಮರ್ | ಅಷ್ಟೊಂದು ಪ್ರಕಾಶಮಾನ ಸ್ಫೋಟ ನಾನೆಂದೂ ನೋಡಿರಲಿಲ್ಲ: ಇರಾನ್ ಮೇಲೆ ದಾಳಿಯ ಕುರಿತು ಬಿ-2 ಬಾಂಬರ್ ಪೈಲಟ್ ಹೇಳಿಕೆ

Update: 2025-06-27 19:27 IST

PC : NDTV 

ವಾಷಿಂಗ್ಟನ್: ಇರಾನಿನ ಫೋರ್ಡೊ ಪರಮಾಣು ಸ್ಥಾವರದ ಮೇಲಿನ ದಾಳಿಯ ಕುರಿತು ಹೊಸ ವಿವರಗಳನ್ನು ಅಮೆರಿಕ ಸೇನೆಯು ಬಹಿರಂಗೊಳಿಸಿದ್ದು, ಬಿ-2 ಬಾಂಬರ್ ವಿಮಾನ ಸಿಬ್ಬಂದಿಗಳ ಮರಳುವಿಕೆ ಮತ್ತು ‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ನ ಹಿಂದಿನ ವರ್ಷಗಳ ರಹಸ್ಯ ಯೋಜನೆಯ ಕುರಿತು ಜಂಟಿ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್ ಡ್ಯಾನ್ ಕೇನ್ ಮೆಲುಕು ಹಾಕಿದ್ದಾರೆ.

‘ಅದು ನಾನು ಈವರೆಗೆ ನೋಡಿರದ ಅತ್ಯಂತ ಪ್ರಕಾಶಮಾನ ಸ್ಫೋಟವಾಗಿತ್ತು, ಅದು ರಾತ್ರಿಯನ್ನು ಹಗಲಾಗಿಸಿತ್ತು’ ಎಂದು 30,000 ಪೌಂಡ್ ತೂಕದ ಭಾರೀ ಬಂಕರ್-ಬಸ್ಟರ್ ಬಾಂಬ್ ಸ್ಫೋಟವನ್ನು ನೋಡಿದ ಬಳಿಕ ಓರ್ವ ಪೈಲಟ್ ಕೇನಿಯವರಿಗೆ ತಿಳಿಸಿದ್ದ.

ತಾವು ಸುರಕ್ಷಿತವಾಗಿ ವಾಪಸ್ ಬರುತ್ತೇವೆಯೇ ಎನ್ನುವುದು ಗೊತ್ತಿಲ್ಲದೆ ಸಿಬ್ಬಂದಿಗಳು ಬಿ-2 ಅಭಿಯಾನವನ್ನು ಕೈಗೊಂಡಿದ್ದರು. ಅವರು ಮರಳಿದಾಗ ಧ್ವಜಗಳು ಹಾರುತ್ತಿದ್ದವು ಮತ್ತು ಅವರ ಕಣ್ಣುಗಳಿಂದ ಕಂಬನಿ ಹರಿಯುತ್ತಿತ್ತು ಎಂದು ವೈಟ್ ಮನ್ ವಾಯುಪಡೆ ನೆಲೆಯಲ್ಲಿನ ಭಾವನಾತ್ಮಕ ಕ್ಷಣಗಳನ್ನು ಬಣ್ಣಿಸುತ್ತ ಕೇನ್ ಹೇಳಿದರು.

‘ನಾನು ಸಿಬ್ಬಂದಿಗಳ ಜೊತೆ ವೀಡಿಯೊದಲ್ಲಿ ಮಾತನಾಡಿದಾಗ, ಇದು ಸಾವಿರಾರು ವಿಜ್ಞಾನಿಗಳು, ವಾಯುಪಡೆ ಸಿಬ್ಬಂದಿ ಮತ್ತು ನಿರ್ವಹಣಾ ಸಿಬ್ಬಂದಿಗಳು ಒಟ್ಟಾಗಿ ಸೇರಿರುವ ಸೂಪರ್ ಬೌಲ್‌ ನಂತೆ ಭಾಸವಾಗುತ್ತಿದೆ ಎಂದು ಸಿಬ್ಬಂದಿಯೋರ್ವರು ಉದ್ಗರಿಸಿದ್ದರು’, ಎಂದು ಕೇನ್ ತಿಳಿಸಿದರು.

‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಇರಾನಿನ ಫೋರ್ಡೊ, ನಟಾನ್ಜ್ ಮತ್ತು ಇಸ್ಫಹಾನ್ ಪರಮಾಣು ಸ್ಥಾವರಗಳನ್ನು ಗುರಿಯಾಗಿಸಿಕೊಂಡಿತ್ತು. ಅಮೆರಿಕವು ಉಕ್ಕಿನ ಕವಚ ಹೊಂದಿದ್ದ, ನಿಖರ ಆಳದಲ್ಲಿ ಸ್ಫೋಟಿಸುವ 30,000 ಪೌಂಡ್‌ ಗಳಷ್ಟು ಬಂಕರ್-ಬಸ್ಟರ್ ಬಾಂಬ್‌ಗಳನ್ನು ಈ ದಾಳಿಗಳಲ್ಲಿ ಬಳಸಿತ್ತು.

ಭೂಮಿಯ ಆಳದಲ್ಲಿ ನಿರ್ಮಾಣಗೊಂಡ ಫೋರ್ಡೊ ಸ್ಥಾವರವು ಎರಡು ವಾತಾಯನ ಮಾರ್ಗಗಳನ್ನು ಹೊಂದಿತ್ತು. ಪ್ರತಿಯೊಂದು ಮಾರ್ಗವು ಒಂದು ಮುಖ್ಯ ಶಾಫ್ಟ್ ಮತ್ತು ಅದರ ಜೊತೆಯಲ್ಲಿ ಎರಡು ಚಿಕ್ಕ ಶಾಫ್ಟ್‌ಗಳು;ಹೀಗೆ ಮೂರು ಶಾಫ್ಟ್‌ಗಳನ್ನು ಹೊಂದಿತ್ತು. ದಾಳಿಗೆ ಕೆಲವು ದಿನಗಳ ಮುನ್ನ ಇರಾನ್ ಅವುಗಳ ಮೇಲೆ ಕಾಂಕ್ರೀಟ್ ಚಪ್ಪಡಿಗಳನ್ನಿರಿಸಿತ್ತು.

ಕೇನ್ ಪ್ರಕಾರ ವರ್ಷಗಳ ಕಾಲ ಅಣಕು ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ಬಾಂಬ್‌ಗಳನ್ನು ಪರಿಷ್ಕರಿಸಲಾಗಿತ್ತು. ಬಾಂಬ್ ಸುರಂಗಗಳ ಮೂಲಕ ಒತ್ತಡದ ಅಲೆಯನ್ನು ಬಿಡುಗಡೆಗೊಳಿಸಿ ಭೂಗತ ಯುರೇನಿಯಂ ಸಂವರ್ಧನೆ ಉಪಕರಣಗಳನ್ನು ನಾಶಗೊಳಿಸುವವರೆಗೆ ಸ್ಫೋಟವನ್ನು ವಿಳಂಬಿಸುವುದು ಇದರ ಉದ್ದೇಶವಾಗಿತ್ತು.

ಫೋರ್ಡೊ ಪರಮಾಣು ಸ್ಥಾವರವನ್ನು 15 ವರ್ಷಕ್ಕೂ ಅಧಿಕ ಸಮಯ ಅಧ್ಯಯನ ನಡೆಸಿದ್ದ ಡಿಫೆನ್ಸ್ ಥ್ರೆಟ್ ರಿಡಕ್ಷನ್ ಏಜೆನ್ಸಿ(ಡಿಟಿಆರ್‌ಎ)ಯ ಇಬ್ಬರು ಅನಾಮಿಕ ಅಧಿಕಾರಿಗಳನ್ನು ಉಲ್ಲೇಖಿಸಿದ ಕೇನಿ, 2009ರಲ್ಲಿ ಡಿಟಿಆರ್‌ಎ ಅಧಿಕಾರಿಯೋರ್ವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಇರಾನಿನ ಪರ್ವತಗಳಲ್ಲಿ ಪ್ರಮುಖ ನಿರ್ಮಾಣಗಳ ಚಿತ್ರಗಳನ್ನು ತೋರಿಸಲಾಗಿತ್ತು. ಈ ಅಧಿಕಾರಿ ಮತ್ತು ನಂತರ ಅವರನ್ನು ಕೂಡಿಕೊಂಡಿದ್ದ ಇನ್ನೋರ್ವ ಸಹೋದ್ಯೋಗಿ ಸ್ಥಳದ ಭೂವಿಜ್ಞಾನ, ಗಾಳಿಯ ಹರಿವಿನ ವ್ಯವಸ್ಥೆಗಳು,ನಿರ್ಮಾಣ ಸಾಮಗ್ರಿಗಳು ಮತ್ತು ಸಂಕೀರ್ಣದ ಒಳಗೆ ಮತ್ತು ಹೊರಗೆ ಉಪಕರಣಗಳ ಸಾಗಾಟವನ್ನು ಪತ್ತೆಹಚ್ಚಲು ವರ್ಷಗಳ ಕಾಲ ಶ್ರಮಿಸಿದ್ದರು. ಅವರು ಈ ಗುರಿಯ ಬಗ್ಗೆ ಅಕ್ಷರಶಃ ಕನಸು ಕಂಡಿದ್ದರು. ಅವರು ಕೆಲಸಕ್ಕೆ ಹೋಗುವಾಗಲೂ ಅದರ ಬಗ್ಗೆಯೇ ಯೋಚಿಸುತ್ತಿದ್ದರು. ಆರಂಭದ ದಿನಗಳಿಂದಲೂ ಅದು ಯಾವುದಕ್ಕಾಗಿ ಎನ್ನುವುದು ಅವರಿಗೆ ತಿಳಿದಿತ್ತು. ಯಾವುದೇ ಶಾಂತಿಯುತ ಉದ್ದೇಶಕ್ಕಾಗಿ ನೀವು ಪರ್ವತದಲ್ಲಿ ಸೆಂಟಿಫ್ಯೂಜ್‌ ಗಳೊಂದಿಗಿನ ಬಹುಪದರಗಳ ಭೂಗತ ಬಂಕರ್‌ ನ್ನು ನಿರ್ಮಿಸುವುದಿಲ್ಲ ಎಂದು ಹೇಳಿದರು.

ಅವರ ಸುದೀರ್ಘ ಪ್ರಯತ್ನವು ಒಂದು ಮುಖ್ಯವಾದ ಸವಾಲನ್ನು ಎತ್ತಿ ತೋರಿಸಿತ್ತು. ಅಂತಹ ಸ್ಥಾವರವನ್ನು ನಾಶಗೊಳಿಸಬಲ್ಲ ಸಮರ್ಥ ಅಸ್ತ್ರ ಆಗಿನ್ನೂ ಅಮೆರಿಕದ ಬಳಿಯಿರಲಿಲ್ಲ. ಹೀಗಾಗಿ ಅಮೆರಿಕವು ವರ್ಷಗಳ ಸಂಶೋಧನೆ, ಪರಿಶ್ರಮದ ಬಳಿಕ ಬಂಕರ್-ಬಸ್ಟರ್ ಬಾಂಬ್‌ ಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಯಶಸ್ವಿಯಾಗಿತ್ತು ಎಂದು ಕೇನ್ ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News