ನೆತನ್ಯಾಹು ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡಬೇಡಿ: ಟ್ರಂಪ್ ಗೆ ವಿರೋಧ ಪಕ್ಷ ಆಗ್ರಹ
Update: 2025-06-26 20:14 IST
Photo: PTI
ಜೆರುಸಲೇಂ: ಇಸ್ರೇಲ್ ನ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ನಡೆಸದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಇಸ್ರೇಲಿನ ವಿರೋಧ ಪಕ್ಷದ ನಾಯಕ ಯಾಯಿರ್ ಲ್ಯಾಪಿಡ್ ಆಗ್ರಹಿಸಿದ್ದಾರೆ.
ನೆತನ್ಯಾಹು ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯನ್ನು ತಕ್ಷಣ ರದ್ದುಗೊಳಿಸಬೇಕೆಂದು ಟ್ರಂಪ್ ಆಗ್ರಹಿಸಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ನ ವಿಪಕ್ಷ ಮುಖಂಡ ಯಾಯಿರ್ ಲ್ಯಾಪಿಡ್ ` ಅಧ್ಯಕ್ಷ ಟ್ರಂಪ್ ಗೆ ನಾವು ಕೃತಜ್ಞರಾಗಿರುತ್ತೇವೆ. ಆದರೆ ಅಧ್ಯಕ್ಷರು ಸ್ವತಂತ್ರ ದೇಶವೊಂದರ ನ್ಯಾಯಾಂಗ ವಿಚಾರಣೆಯಲ್ಲಿ ಹಸ್ತಕ್ಷೇಪ ನಡೆಸಬಾರದು' ಎಂದಿದ್ದಾರೆ. ಲ್ಯಾಪಿಡ್ ಹೇಳಿಕೆಯನ್ನು ನೆತನ್ಯಾಹು ನೇತೃತ್ವದ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ `ರಿಲೀಜಿಯಸ್ ಝಿಯೊನಿಸಮ್ ಪಾರ್ಟಿ' ಬೆಂಬಲಿಸಿದ್ದು `ಇಸ್ರೇಲ್ ರಾಷ್ಟ್ರದ ಕಾನೂನು ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದು ಅಮೆರಿಕ ಅಧ್ಯಕ್ಷರ ಕೆಲಸವಲ್ಲ' ಎಂದಿದೆ.