ಸುಂಕ ನೀತಿ ಸಮರ್ಥಿಸಿಕೊಂಡ ಟ್ರಂಪ್ : ಒಬಾಮಾ ನೇಮಕ ಮಾಡಿದ ನ್ಯಾಯಮೂರ್ತಿಗೆ ಕೃತಜ್ಞತೆ!
ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಬಹುತೇಕ ಸುಂಕಗಳು ಕಾನೂನು ಬಾಹಿರ ಎಂದು ಅಮೆರಿಕದ ಫೆಡರಲ್ ಅಪೀಲ್ಸ್ ಕೋರ್ಟ್ ಘೋಷಿಸಿದ ಬಳಿಕವೂ ಟ್ರಂಪ್ ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ತಮ್ಮ ಪರ ಅಭಿಪ್ರಾಯವನ್ನು ತೀರ್ಪಿನಲ್ಲಿ ದಾಖಲಿಸಿದ್ದಕ್ಕಾಗಿ ಮಾಜಿ ಅಧ್ಯಕ್ಷ ಒಬಾಮಾ ನೇಮಕ ಮಾಡಿದ್ದ ನ್ಯಾಯಮೂರ್ತಿಗಳಿಗೆ ಟ್ರಂಪ್ ಕೃತಜ್ಞತೆ ಸಲ್ಲಿಸಿದ್ದಾರೆ.
ಟ್ರುಥ್ ಸೋಶಿಯಲ್‍ನಲ್ಲಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಟ್ರಂಪ್, ಸುಂಕ ನಮ್ಮ ದೇಶಕ್ಕೆ ಟ್ರಿಲಿಯನ್ ಡಾಲರ್ ಆದಾಯ ತಂದಿದೆ. ಇದು ಇಲ್ಲದಿದ್ದರೆ ದೇಶ ಸಂಪೂರ್ಣ ನಾಶವಾಗುತ್ತಿತ್ತು ಹಾಗೂ ನಮ್ಮ ಸೇನಾ ಶಕ್ತಿ ಸಹಜವಾಗಿಯೇ ಕುಂದುತ್ತಿತ್ತು ಎಂದು ಹೇಳಿದ್ದಾರೆ.
ನ್ಯಾಯಾಲಯದ ಬಹುಮತದ ತೀರ್ಪನ್ನು ಟೀಕಿಸಿರುವ ಅವರು, ಡೆಮಾಕ್ರಟಿಕ್ ಪಕ್ಷ ನೇಮಕ ಮಾಡಿದ ನ್ಯಾಯಮೂರ್ತಿಗಳು ತಮ್ಮ ನಿಲುವನ್ನು ಬೆಂಬಲಿಸಿದ್ದನ್ನು ಸ್ವಾಗತಿಸಿದ್ದಾರೆ.
7-4 ಬಹುಮತದ ತೀರ್ಪಿನಲ್ಲಿ ಕ್ರಾಂತಿಕಾರಿ ಎಡಪಂಥೀಯ ಗುಂಪಿನ ನ್ಯಾಯಮೂರ್ತಿಗಳು ಕಾಳಜಿ ವಹಿಸಿಲ್ಲ. ಆದರೆ ಒಬ್ಬರು ಡೆಮಾಕ್ರೆಟ್, ಒಬಾಮಾ ನೇಮಕ ಮಾಡಿದ ನ್ಯಾಯಮೂರ್ತಿಗಳು ದೇಶವನ್ನು ರಕ್ಷಿಸುವ ಮತ ಹಾಕಿದ್ದಾರೆ. ಅವರ ಧೈರ್ಯಕ್ಕೆ ನಾನು ಕೃತಜ್ಞತೆ ಸಲ್ಲಿಸಬೇಕು. ಅವರು ಅಮೆರಿಕವನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ" ಎಂದು ಟ್ರಂಪ್ ಹೇಳಿದ್ದಾರೆ.
ಕಳೆದ ವಾರ ಅಮೆರಿಕದ ಕೋರ್ಟ್ ಆಫ್ ಅಪೀಲ್ಸ್ ಸುಂಕದ ಸಂಬಂಧ ತೀರ್ಪು ನೀಡಿ, ಟ್ರಂಪ್ ತಮ್ಮ ಅಧ್ಯಕ್ಷೀಯ ಅಧಿಕಾರವನ್ನು ಮೀರಿ ಸುಂಕಗಳನ್ನು ಹೇರಿದ್ದಾರೆ ಎಂದು ಆಕ್ಷೇಪಿಸಿತ್ತು. ಈ ಕ್ರಮ ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ಹೇಳಿತ್ತು.