×
Ad

ಅಮೆರಿಕ ವಿದೇಶಿ ನೆರವು ಕಡಿತದಿಂದ 14 ದಶಲಕ್ಷಕ್ಕೂ ಹೆಚ್ಚು ಜನರು ಸಾಯಬಹುದು; ಕಡಿಮೆ, ಮಧ್ಯಮ ಆದಾಯದ ದೇಶಗಳಿಗೆ ಆಘಾತ: ಅಧ್ಯಯನ ವರದಿ

Update: 2025-07-01 23:03 IST

PC : NDTV

ವಾಷಿಂಗ್ಟನ್: `ಅಂತರಾಷ್ಟ್ರೀಯ ಅಭಿವೃದ್ಧಿಗಾಗಿ ಅಮೆರಿಕದ ಏಜೆನ್ಸಿ'(ಯುಎಸ್AID)ಗೆ ಅನುದಾನದ ತೀವ್ರ ಕಡಿತವು 2030ರ ವೇಳೆಗೆ 14 ದಶಲಕ್ಷಕ್ಕೂ ಅಧಿಕ ಹೆಚ್ಚುವರಿ ಸಾವಿಗೆ ಕಾರಣವಾಗಬಹುದು ಎಂದು `ಲ್ಯಾನ್ಸೆಟ್ ಮೆಡಿಕಲ್ ಜರ್ನಲ್' ನಲ್ಲಿ ಪ್ರಕಟವಾದ ಸಂಶೋಧನಾ ವರದಿ ಹೇಳಿದೆ.

ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಹೆಚ್ಚಿನ ಆಘಾತ ಎದುರಾಗಿದೆ. ಅಕಾಲಿಕ ಮರಣದ ಅಪಾಯದಲ್ಲಿ ಇರುವವರಲ್ಲಿ ಮಕ್ಕಳ ಪ್ರಮಾಣ ಮೂರನೇ ಒಂದರಷ್ಟಾಗಿದೆ. ಯುಎಸ್AID ನಿಧಿ ಕಡಿತವು ದುರ್ಬಲ ಜನಸಮುದಾಯದ ಆರೋಗ್ಯದಲ್ಲಿ ಎರಡು ದಶಕಗಳ ಪ್ರಗತಿಯನ್ನು ಹಿಮ್ಮುಖಗೊಳಿಸುವ ಮತ್ತು ಏಕಾಏಕಿ ಸ್ಥಗಿತಗೊಳಿಸುವ ಅಪಾಯಕ್ಕೆ ಕಾರಣವಾಗಬಹುದು ಎಂದು ಸಹ ಸಂಶೋಧಕ ಡೇವಿಡ್ ರಸೆಲ್ಲಾ ಹೇಳಿದ್ದಾರೆ.

ಯುಎಸ್AIDಯ 80%ಕ್ಕೂ ಅಧಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವುದಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ಕಳೆದ ಮಾರ್ಚ್ನಲ್ಲಿ ಹೇಳಿದ್ದರು. `ವ್ಯರ್ಥ ಖರ್ಚು'ಗಳನ್ನು ಕಡಿಮೆಗೊಳಿಸುವ ಉದ್ದೇಶವಿದೆ ಎಂದು ಟ್ರಂಪ್ ಆಡಳಿತ ಹೇಳಿದೆ. ವಿವಾದಾತ್ಮಕ ಅನುದಾನ ಕಡಿತ ನಿರ್ಧಾರವನ್ನು ವಿಶ್ವದಾದ್ಯಂತದ ಮಾನವ ಹಕ್ಕುಗಳ ಸಂಘಟನೆ ಖಂಡಿಸಿದೆ. ವಿದೇಶಿ ನೆರವು ಕಡಿತದ ಯೋಜನೆಯ ಮೇಲುಸ್ತುವಾರಿಯನ್ನು ಎಲಾನ್ ಮಸ್ಕ್ ನೇತೃತ್ವದ `ಸರ್ಕಾರದ ಕಾರ್ಯದಕ್ಷತೆ ಇಲಾಖೆ' ವಹಿಸಿತ್ತು.

`ಅಮೆರಿಕ ಮೊದಲು' ಎಂಬ ಪರಿಕಲ್ಪನೆಯಡಿ ಸಾಗರೋತ್ತರ ಖರ್ಚುಗಳನ್ನು ನಿಕಟವಾಗಿ ಹೊಂದಾಣಿಕೆ ಮಾಡಲು ಬಯಸುವುದಾಗಿ ತನ್ನ ಎರಡನೇ ಅವಧಿಯಲ್ಲಿ ಟ್ರಂಪ್ ಪುನರುಚ್ಚರಿಸಿದ್ದರು.

2001ರಿಂದ 2021ರ ನಡುವೆ ಅಭಿವೃದ್ಧಿಶೀಲ ದೇಶಗಳಲ್ಲಿ 90 ದಶಲಕ್ಷಕ್ಕೂ ಅಧಿಕ ಸಾವುಗಳನ್ನು ಯುಎಸ್AID ನಿಧಿಯು ತಡೆದಿದೆ ಎಂದು ವರದಿಯಲ್ಲಿ ಒತ್ತಿಹೇಳಲಾಗಿದೆ. ಯುಎಸ್AIDಯ ಅನುದಾನದಲ್ಲಿ 83%ದಷ್ಟು ಕಡಿತವಾಗಲಿದೆ. ಅಮೆರಿಕದ ವಿದೇಶಾಂಗ ಇಲಾಖೆಯಡಿ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲ್ಪಡಬಹುದಾದ ಸುಮಾರು 1000 ಯೋಜನೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ಮಾರ್ಕೋ ರೂಬಿಯೋ ಹೇಳಿದ್ದರು. ಅನುದಾನ ಕಡಿತದಿಂದ 2030ರ ವೇಳೆಗೆ, 4.5 ದಶಲಕ್ಷಕ್ಕೂ ಹೆಚ್ಚು ಮಕ್ಕಳು(ಐದು ವರ್ಷದ ಕೆಳಗಿನವರು) ಸೇರಿದಂತೆ 14 ದಶಲಕ್ಷಕ್ಕೂ ಅಧಿಕ ತಪ್ಪಿಸಬಹುದಾದ ಸಾವುಗಳಿಗೆ ಕಾರಣವಾಗಬಹುದು ಎಂದು ವರದಿ ಹೇಳಿದೆ.

ಅಮೆರಿಕದ ಅನುದಾನ ಕಡಿತವು ಪಡಿತರ ಆಹಾರವನ್ನು ಕನಿಷ್ಠ ಮಟ್ಟಕ್ಕೆ ಸೀಮಿತಗೊಳಿಸಿದ ಬಳಿಕ ಕೆನ್ಯಾದ ನಿರಾಶ್ರಿತರ ಶಿಬಿರದಲ್ಲಿ ಸಾವಿರಾರು ಜನರು ಕ್ರಮೇಣ ಉಪವಾಸದ ಸ್ಥಿತಿಗೆ ಜಾರುತ್ತಿದ್ದಾರೆ ಎಂದು ಕಳೆದ ತಿಂಗಳು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿತ್ತು.

►2023ರಲ್ಲಿ 55 ಶತಕೋಟಿ ಡಾಲರ್ ನೆರವು ಒದಗಿಸಿದ್ದ ಅಮೆರಿಕ

ವಿಶ್ವದಲ್ಲಿ ಅತೀ ಹೆಚ್ಚು ಮಾನವೀಯ ನೆರವು ಪೂರೈಸುವ ದೇಶ ಎಂದು ಗುರುತಿಸಿಕೊಂಡಿರುವ ಅಮೆರಿಕ 60ಕ್ಕೂ ಅಧಿಕ ದೇಶಗಳಲ್ಲಿ ನೆರವು ಒದಗಿಸುವ ಕಾರ್ಯನಿರ್ವಹಿಸುತ್ತಿದ್ದು 2023ರಲ್ಲಿ 55 ಶತಕೋಟಿ ಡಾಲರ್ ನೆರವು ಒದಗಿಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಯುಎಸ್AIDಯನ್ನು ಜಾಗತಿಕ ನೆರವು ವ್ಯವಸ್ಥೆಗೆ ಅವಿಭಾಜ್ಯವೆಂದು ಪರಿಗಣಿಸಲಾಗಿದೆ. ಅನುದಾನ ಕಡಿತವನ್ನು ಟ್ರಂಪ್ ಘೋಷಿಸಿದ ಬಳಿಕ ಬ್ರಿಟನ್, ಫ್ರಾನ್ಸ್, ಜರ್ಮನಿ ಸೇರಿದಂತೆ ಇತರ ಕೆಲವು ರಾಷ್ಟ್ರಗಳೂ ಇದೇ ಮಾರ್ಗವನ್ನು ಅನುಸರಿಸಿವೆ. ಈ ನಡೆಯನ್ನು ಮಾನವೀಯ ಸಂಘಟನೆಗಳು ವ್ಯಾಪಕವಾಗಿ ಖಂಡಿಸಿವೆ. ಅಂತರಾಷ್ಟ್ರೀಯ ಮಾನವೀಯ ನೆರವು ಕ್ಷೇತ್ರದಲ್ಲಿ ಇದುವರೆಗಿನ ಅತೀ ತೀವ್ರ ಅನುದಾನ ಕಡಿತವನ್ನು ಎದುರಿಸುತ್ತಿರುವುದಾಗಿ ಕಳೆದ ತಿಂಗಳು ವಿಶ್ವಸಂಸ್ಥೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News