ಮಿಲಿಟರಿ ನಿಯಂತ್ರಿತ ಗಾಝಾಗೆ ಮಾರಕವಾಗಿರುವ ಅಮೆರಿಕ - ಇಸ್ರೇಲ್ ನೆರವು ಯೋಜನೆ ಬೇಕಿಲ್ಲ: 170ಕ್ಕೂ ಅಧಿಕ ಜಾಗತಿಕ ಎನ್‌ಜಿಒಗಳ ಕರೆ
ಸಾಂದರ್ಭಿಕ ಚಿತ್ರ (credit: PTI)
ಗಾಝಾ: ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ವಿತರಣೆ ಯೋಜನೆಯಾದ ಗಾಝಾ ಹ್ಯುಮಾನಿಟೇರಿಯನ್ ಫೌಂಡೇಷನ್(ಜಿಎಚ್‌ಎಫ್) ಗಾಝಾದ ಜನರು ಹಸಿವಿನಿಂದ ನರಳುವಂತೆ ಮಾಡಲು ಮತ್ತು ಅವರ ಮೇಲೆ ದಾಳಿ ನಡೆಸಲು ಅನುವು ಮಾಡಿಕೊಡುತ್ತಿದೆ ಎಂದು ಆರೋಪಿಸಿರುವ ಆಕ್ಸ್‌ಫಾಮ್ ಮತ್ತು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸೇರಿದಂತೆ 170ಕ್ಕೂ ಅಧಿಕ ಎನ್‌ಜಿಒಗಳು ಅದನ್ನು ತಕ್ಷಣವೇ ಅಂತ್ಯಗೊಳಿಸುವಂತೆ ಕರೆ ನೀಡಿವೆ. ವಿಶ್ವಸಂಸ್ಥೆ ನೇತೃತ್ವದ ಸಮನ್ವಯ ವ್ಯವಸ್ಥೆಗೆ ಮರಳುವಂತೆ ಮತ್ತು ಗಾಝಾದ ಮೇಲಿನ ಕ್ರೂರ ನಿರ್ಬಂಧವನ್ನು ತೆಗೆದುಹಾಕುವಂತೆ ಅವು ಆಗ್ರಹಿಸಿವೆ ಎಂದು thewire.in ವರದಿ ಮಾಡಿದೆ.
‘ಇಂದು ಗಾಝಾದಲ್ಲಿಯ ಫೆಲೆಸ್ತೀನಿಗಳು ಅಸಾಧ್ಯವಾದ ಆಯ್ಕೆಯನ್ನು ಎದುರಿಸುತ್ತಿದ್ದಾರೆ; ಹಸಿವಿನಿಂದ ನರಳುವುದು ಅಥವಾ ತಮ್ಮ ಕುಟುಂಬದ ತುತ್ತಿನ ಚೀಲಗಳನ್ನು ತುಂಬಿಸಲು ಆಹಾರವನ್ನು ಪಡೆಯುವ ಹತಾಶ ಪ್ರಯತ್ನದಲ್ಲಿ ಗುಂಡಿಗೆ ತುತ್ತಾಗುವ ಅಪಾಯ. ಇಸ್ರೇಲಿ ವಿತರಣಾ ಯೋಜನೆ ಆರಂಭಗೊಂಡ ನಂತರದ ವಾರಗಳು ಅಕ್ಟೋಬರ್ 2023ರಿಂದೀಚಿಗೆ ಅತ್ಯಂತ ಮಾರಣಾಂತಿಕ ಮತ್ತು ಅತ್ಯಂತ ಹಿಂಸಾತ್ಮಕವಾಗಿವೆ’ ಎಂದು ಈ ಎನ್‌ಜಿಒಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಆಹಾರವನ್ನು ಪಡೆಯುವ ಹತಾಶ ಪ್ರಯತ್ನದಲ್ಲಿ 500ಕ್ಕೂ ಅಧಿಕ ಫೆಲೆಸ್ತೀನಿಗಳು ಕೊಲ್ಲಲ್ಪಟ್ಟಿದ್ದಾರೆ ಮತ್ತು ಸುಮಾರು 4,000 ಜನರು ಗಾಯಗೊಂಡಿದ್ದಾರೆ ಎಂದು ಅವು ಎತ್ತಿ ತೋರಿಸಿವೆ.
ಗಮನಾರ್ಹವಾಗಿ,ಈ ವರ್ಷದ ಆರಂಭದಲ್ಲಿ ಜಿಎಚ್‌ಎಫ್ ಆರಂಭಗೊಂಡಾಗಿನಿಂದ ತಾತ್ಕಾಲಿಕ ಕದನ ವಿರಾಮ ಸಂದರ್ಭದಲ್ಲಿ ಗಾಝಾದಾದ್ಯಂತ ಅಸ್ತಿತ್ವದಲ್ಲಿದ್ದ 400ಕ್ಕೂ ಅಧಿಕ ನೆರವು ವಿತರಣಾ ಕೇಂದ್ರಗಳ ಬದಲು ಕೇವಲ ನಾಲ್ಕು ಮಿಲಿಟರಿ ನಿಯಂತ್ರಿತ, ಕೇಂದ್ರೀಕೃತ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.
ಇಸ್ರೇಲಿ ಸರಕಾರದ ಹೊಸ ಯೋಜನೆಯಡಿ ನೆರವು ವಿತರಣಾ ಕೇಂದ್ರಗಳನ್ನು ತಲುಪಲು ನಾಗರಿಕರು ಅಪಾಯಕಾರಿ ಭೂಪ್ರದೇಶ ಮತ್ತು ಸಂಘರ್ಷ ವಲಯಗಳ ಮೂಲಕ ನಡೆದುಕೊಂಡು ಹೋಗುವಂತೆ ಮಾಡಲಾಗಿದೆ. ಬೇಲಿಯಿಂದ ಸುತ್ತುವರಿದ ಮಿಲಿಟರೀಕೃತ ವಿತರಣಾ ಕೇಂದ್ರಗಳನ್ನು ತಲುಪಲು ಏಕೈಕ ಪ್ರವೇಶ ಮಾರ್ಗವಿದ್ದು,ಸಾವಿರಾರು ಜನರನ್ನು ಏಕಕಾಲದಲ್ಲಿ ಆವರಣದೊಳಗೆ ಬಿಡಲಾಗುತ್ತಿದೆ ಮತ್ತು ಅವರು ಸೀಮಿತ ಆಹಾರ ಪೂರೈಕೆಗಾಗಿ ಹೋರಾಡುವಂತೆ ಮಾಡಲಾಗುತ್ತಿದೆ. ಈ ಕೇಂದ್ರಗಳು ಅಂತರರಾಷ್ಟ್ರೀಯ ಕಾನೂನನ್ನು ಸ್ಪಷ್ಟವಾಗಿ ಧಿಕ್ಕರಿಸಿ ಪುನರಪಿ ನರಮೇಧದ ತಾಣಗಳಾಗಿವೆ. ತೀವ್ರ ಹಸಿವು ಮತ್ತು ಕ್ಷಾಮದಂತಹ ಪರಿಸ್ಥಿತಿಯಲ್ಲಿ ಫೆಲೆಸ್ತೀನಿ ಕುಟುಂಬಗಳಿಗೆ ಆಹಾರಕ್ಕಾಗಿ ಪೈಪೋಟಿ ನಡೆಸುವ ಶಕ್ತಿಯೂ ಉಳಿದಿಲ್ಲ ಎಂದು ಎನ್‌ಜಿಒಗಳು ಕಳವಳ ವ್ಯಕ್ತಪಡಿಸಿವೆ.
ಎನ್‌ಜಿಒಗಳ ಜಂಟಿ ಹೇಳಿಕೆಯನ್ನು ವಿಶ್ವಸಂಸ್ಥೆಯ ಏಜೆನ್ಸಿಗಳು ಮತ್ತು ಇತರ ಮಾನವೀಯ ನಾಯಕರು ಬೆಂಬಲಿಸಿದ್ದಾರೆ, ಅವರು ಹಿಂದೆಯೂ ಜಿಎಚ್‌ಎಫ್ ಮಾದರಿಯನ್ನು ಟೀಕಿಸಿದ್ದರು.
ಎನ್‌ಜಿಒಗಳ ಜಂಟಿ ಹೇಳಿಕೆಯನ್ನು ಹಂಚಿಕೊಂಡಿರುವ ವಿಶ್ವಸಂಸ್ಥೆಯ ಪರಿಹಾರ ಕಾರ್ಯಗಳ ಏಜೆನ್ಸಿಯ ಮಹಾ ಆಯುಕ್ತ ಫಿಲಿಪ್ ಲಾಝರಿನಿ ಅವರು,ಮಾನವೀಯ ಸಮುದಾಯವು ಜಿಎಚ್‌ಎಫ್ ಅಂತ್ಯಕ್ಕೆ ಕರೆ ನೀಡುತ್ತದೆ, ಏಕೆಂದರೆ ಜಿಎಚ್‌ಎಫ್ ಗಾಝಾದ ಜನರಿಗೆ ಹಸಿವು ಮತ್ತು ಗುಂಡೇಟನ್ನು ಮಾತ್ರ ನೀಡುತ್ತದೆ ಎಂದು ಹೇಳಿದ್ದಾರೆ.