ಪಾಕಿಸ್ತಾನ | ಭೂಕುಸಿತಕ್ಕೆ 7 ಸ್ವಯಂಸೇವಕರ ಬಲಿ
Update: 2025-08-11 23:35 IST
Photo Credit | AFP
ಪೇಷಾವರ, ಆ.11: ಉತ್ತರ ಪಾಕಿಸ್ತಾನದಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ಹಾನಿಯಾಗಿದ್ದ ಒಳಚರಂಡಿ ಕಾಲುವೆಯನ್ನು ದುರಸ್ತಿ ಮಾಡುತ್ತಿದ್ದಾಗ ಸಂಭವಿಸಿದ ಭಾರೀ ಭೂಕುಸಿತದಿಂದಾಗಿ 7 ಸ್ವಯಂಸೇವಕರು ಸಾವನ್ನಪ್ಪಿದ್ದು ಇತರ ಮೂವರು ಗಾಯಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಗಿಲ್ಗಿಟ್ ಬಾಲ್ಟಿಸ್ತಾನದ ದನ್ಯೋರ್ ನಗರದಲ್ಲಿ ಸೋಮವಾರ ಬೆಳಿಗ್ಗೆ ದುರಂತ ಸಂಭವಿಸಿದೆ ಎಂದು ಸ್ಥಳೀಯಾಡಳಿತದ ವಕ್ತಾರರು ಹೇಳಿದ್ದಾರೆ.
ರವಿವಾರ ದಿಢೀರ್ ಪ್ರವಾಹದಿಂದ ಹಿಮನದಿಯ ಸರೋವರದ ಕಟ್ಟೆ ಒಡೆದ ಕಾರಣ ದನ್ಯೋರ್ ನಗರದ ಮೂಲಕ ಸಾಗುವ ಕಾರಕೋರಂ ಹೆದ್ದಾರಿಗೆ ಹಾನಿಯಾಗಿದ್ದು ಪಾಕಿಸ್ತಾನ ಮತ್ತು ಚೀನಾ ನಡುವಿನ ಸಂಚಾರಕ್ಕೆ ಅಡ್ಡಿಯಾಗಿತ್ತು. ದುರಸ್ತಿ ಕಾರ್ಯಕ್ಕೆ ಇಂಜಿನಿಯರ್‍ಗಳು ಹಾಗೂ ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ದುರಸ್ತಿ ನಡೆಸುತ್ತಿದ್ದಾಗ ಏಕಾಏಕಿ ಭೂಕುಸಿತ ಸಂಭವಿಸಿದೆ. ಹಲವು ಮನೆ, ಕೃಷಿ ಭೂಮಿಗೂ ಹಾನಿಯಾಗಿದೆ ಎಂದು ವರದಿ ಹೇಳಿದೆ.