ಪಿಒಕೆಯಲ್ಲಿ ಪಾಕ್ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ | ಇಂಟರ್ ನೆಟ್ ಸ್ಥಗಿತ; ಲಾಕ್‍ಡೌನ್ ಘೋಷಣೆ
Photo Credit : ANI
ಹೊಸದಿಲ್ಲಿ, ಸೆ.29: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಮೂಲಭೂತ ಹಕ್ಕುಗಳ ನಿರಾಕರಣೆಯನ್ನು ವಿರೋಧಿಸಿ ಜಮ್ಮು ಕಾಶ್ಮೀರ್ ಜಾಯಿಂಟ್ ಅವಾಮಿ ಆ್ಯಕ್ಷನ್ ಕಮಿಟಿ(ಜೆಕೆಜೆಎಎಸಿ) ಕರೆ ನೀಡಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಬೀದಿಗಿಳಿದು ಸರಕಾರದ ವಿರುದ್ಧ ಘೋಷಣೆ ಕೂಗಿರುವುದಾಗಿ ವರದಿಯಾಗಿದೆ.
ಜನರಿಗೆ ಅವರ ಹಕ್ಕುಗಳನ್ನು ಒದಗಿಸುವಂತೆ ಜೋರಾದ ಮತ್ತು ಸ್ಪಷ್ಟವಾದ ಸಂದೇಶವನ್ನು ರವಾನಿಸಲು ಸೋಮವಾರ ಪಿಒಕೆಯಲ್ಲಿ ಲಾಕ್ ಡೌನ್ ಘೋಷಿಸಿರುವುದಾಗಿ ಜೆಕೆಜೆಎಎಸಿ ಹೇಳಿತ್ತು. ವಲಯದಲ್ಲಿ ಫೋನ್ ಸಂಪರ್ಕ, ಇಂಟರ್ ನೆಟ್ ಸೇವೆಗಳು ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಭಾಗಶಃ ಸ್ಥಗಿತಗೊಳಿಸಲಾಗಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.
ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವುದರಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಅನಿರ್ದಿಷ್ಟಾವಧಿಯ ಮುಷ್ಕರ ನಡೆಯಲಿದೆ ಎಂದು ನಾಗರಿಕ ಸಮಾಜ ಸಂಘಟನೆಯ ಒಕ್ಕೂಟ ಜೆಕೆಜೆಎಎಸಿ ಹೇಳಿದೆ.
ಇದಕ್ಕೂ ಮುನ್ನ ಪಿಒಕೆ ಸರಕಾರ ಹಾಗೂ ಶೆಹಬಾಝ್ ಷರೀಫ್ ನೇತೃತ್ವದ ಪಾಕಿಸ್ತಾನ ಸರಕಾರಗಳು ಜೆಕೆಜೆಎಎಸಿ ಜೊತೆ ನಡೆಸಿದ ಮಾತುಕತೆ ವಿಫಲವಾಗಿತ್ತು.
ಜಮ್ಮು ಕಾಶ್ಮೀರದ(ಭಾರತದ ಬದಿಯಿಂದ ಬರುವ) ನಿರಾಶ್ರಿತರಿಗಾಗಿ 12 ಶಾಸಕಾಂಗ ಸ್ಥಾನಗಳ ಮೀಸಲಾತಿ ರದ್ದುಗೊಳಿಸಬೇಕು, ಸಬ್ಸಿಡಿ ದರದಲ್ಲಿ ಹಿಟ್ಟು, ಮಂಗ್ಲಾ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿ ನ್ಯಾಯವಾದ ರಾಯಲ್ಟಿ(ಸ್ವಾಮ್ಯ ಶುಲ್ಕ) ಮತ್ತು ಪಾಕ್ ಸರಕಾರ ಭರವಸೆ ನೀಡಿರುವ ದೀರ್ಘಾವಧಿಯಿಂದ ವಿಳಂಬಗೊಂಡಿರುವ ಸುಧಾರಣಾ ಪ್ರಕ್ರಿಯೆಗಳನ್ನು ತಕ್ಷಣ ಜಾರಿಗೊಳಿಸುವುದು ಸೇರಿದಂತೆ 38 ಅಂಶಗಳ ಬೇಡಿಕೆಯನ್ನು ಮುಂದಿರಿಸಿ ಪ್ರತಿಭಟನೆ ನಡೆಯುತ್ತಿದೆ.
ಮುಜಫರಬಾದ್‍ನಲ್ಲಿ ಸಮಿತಿಯ ಸದಸ್ಯ ಶಾರೂಕತ್ ನವಾಜ್ ಮಿರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.
ಪ್ರತಿಭಟನೆಯನ್ನು ನಿಯಂತ್ರಿಸಲು ಮುಂದಾಗಿರುವ ಪಾಕ್ ಸರಕಾರ ರವಿವಾರ ರಾತ್ರಿ ಜೆಕೆಎಸಿಸಿಯ ಪ್ರಮುಖ ಸದಸ್ಯರನ್ನು ಬಂಧಿಸಿದ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರುವುದಾಗಿ ವರದಿಯಾಗಿದೆ. ಪ್ರತಿಭಟನೆಯನ್ನು ದಮನಿಸಲು ಪಂಜಾಬ್ ಪೊಲೀಸ್, ಗಡಿ ಭದ್ರತಾ ಪಡೆಯ 2000 ಹೆಚ್ಚುವರಿ ತುಕಡಿಗಳನ್ನು ಪಾಕ್ ಸರಕಾರ ನಿಯೋಜಿಸಿದೆ. ಪಿಒಕೆಯ ಎಲ್ಲಾ ಜಿಲ್ಲಾ ಕೇಂದ್ರಗಳನ್ನು ಅರೆ ಸೇನಾಪಡೆಯನ್ನು ನಿಯೋಜಿಸಲಾಗಿದ್ದು ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದ್ದು ಚೆಕ್‍ಪಾಯಿಂಟ್‍ಗಳಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.
ಪ್ರತಿಭಟನೆ ಉಲ್ಬಣಗೊಳ್ಳುವ ಭಯ:
ವ್ಯಾಪಕ ಪ್ರತಿಭಟನೆಯು `ಪಾಕಿಸ್ತಾನದಿಂದ ಸ್ವಾತಂತ್ರ್ಯ'ದ ಆಗ್ರಹವಾಗಿ ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ಪಾಕಿಸ್ತಾನದ ಭದ್ರತಾ ಮೂಲಗಳು ಎಚ್ಚರಿಕೆ ಸಂದೇಶ ರವಾನಿಸಿರುವುದಾಗಿ ವರದಿಯಾಗಿದೆ.
ನಿರಾಶ್ರಿತರಿಗೆ ಮೀಸಲಿರಿಸಿದ ಅಸೆಂಬ್ಲಿ ಸ್ಥಾನಗಳನ್ನು ರದ್ದುಗೊಳಿಸುವ ಬೇಡಿಕೆಯು ಪಿಒಕೆಯನ್ನು ನಿಯಂತ್ರಿಸಲು ಪಾಕಿಸ್ತಾನ ಬಳಸಿದ ರಾಜಕೀಯ ವ್ಯವಸ್ಥೆಗೆ ನೇರ ಬೆದರಿಕೆ ಎಂದು ಪರಿಗಣಿಸಲಾಗಿದೆ.