ಪಾಕಿಸ್ತಾನ | ಮಾರ್ಚ್ 2ರಿಂದ ದೇಶಾದ್ಯಂತ ಪ್ರತಿಭಟನೆ ; ಪಿಟಿಐ ಘೋಷಣೆ
Update: 2024-02-28 22:38 IST
Photo : AFP
ಇಸ್ಲಮಾಬಾದ್: ಚುನಾವಣೆ ಅಕ್ರಮಗಳನ್ನು ವಿರೋಧಿಸಿ ಮಾರ್ಚ್ 2ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ ಘೋಷಿಸಿದೆ.
ಗರಿಷ್ಟ ಭದ್ರತೆಯ ಅಡಿಯಾಲಾ ಜೈಲಿನಲ್ಲಿ ಬಂಧನದಲ್ಲಿರುವ ಪಿಟಿಐ ಮುಖಂಡ ಇಮ್ರಾನ್‍ಖಾನ್‍ರನ್ನು ಭೇಟಿಯಾಗಿ ಚರ್ಚಿಸಿದ ಬಳಿಕ ಲಾಹೋರ್‍ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಒಮರ್ ಅಯೂಬ್ `ಫೆಬ್ರವರಿ 8ರಂದು ನಡೆದಿದ್ದ ಚುನಾವಣೆ ಹಾಗೂ ಮತ ಎಣಿಕೆಯಲ್ಲಿ ಅಕ್ರಮ ನಡೆದಿದ್ದರಿಂದ ತಮ್ಮ ಪಕ್ಷ ಅಧಿಕಾರದಿಂದ ವಂಚಿತವಾಗಿದೆ. ಇದನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗೆ ನಿರ್ಧರಿಸಲಾಗಿದೆ' ಎಂದಿದ್ದಾರೆ.