ಪಾಕಿಸ್ತಾನ: ಪೋಲಿಯೊ ಲಸಿಕೆ ಕಾರ್ಯಕ್ರಮದ ಭದ್ರತಾ ಸಿಬ್ಬಂದಿ ಗುಂಡೇಟಿಗೆ ಬಲಿ
ಸಾಂದರ್ಭಿಕ ಚಿತ್ರ
ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ಪೋಲಿಯೊ ಲಸಿಕೆ ಅಭಿಯಾನದ ಮೊದಲ ದಿನವೇ ಕಾರ್ಯಕ್ರಮದ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ವಾಯವ್ಯ ಖೈಬರ್ ಪಖ್ತೂಂಕ್ವಾ ಪ್ರಾಂತದ ಜಮ್ರೂದ್ ನಗರದಲ್ಲಿ ಪೋಲಿಯೊ ಲಸಿಕೆ ಕಾರ್ಯಕ್ರಮಕ್ಕೆ ಭದ್ರತೆ ನೀಡಲು ವಾಹನದಲ್ಲಿ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಬೈಕ್‍ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಡ್ಡಗಟ್ಟಿ ಗುಂಡಿನ ಮಳೆಗರೆದಾಗ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದುರಂತ ಘಟನೆಯ ಬಳಿಕವೂ ಲಸಿಕೆ ಹಾಕುವ ಅಭಿಯಾನ ನಿಗದಿತ ರೀತಿಯಲ್ಲೇ ಸಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಝರ್ಮತ್ ಖಾನ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಕಳೆದ ವರ್ಷ (2024) ಪಾಕಿಸ್ತಾನದಲ್ಲಿ 73 ಪೋಲಿಯೊ ಪ್ರಕರಣ ವರದಿಯಾಗಿದ್ದು ಈ ವರ್ಷದ ಮೊದಲ ಪೋಲಿಯೊ ಲಸಿಕಾ ಕಾರ್ಯಕ್ರಮ ಫೆಬ್ರವರಿ 3ರಂದು ಆರಂಭಗೊಂಡಿದ್ದು ಒಂದು ವಾರ ಮುಂದುವರಿಯಲಿದೆ.