×
Ad

ಫೆಲೆಸ್ತೀನ್ ಗೆ ರಾಷ್ಟ್ರದ ಮಾನ್ಯತೆ ನೀಡುವಂತೆ ಫ್ರಾನ್ಸ್ ಸಹಿತ 14 ರಾಷ್ಟ್ರಗಳ ಕರೆ

Update: 2025-07-30 22:43 IST

ಸಾಂದರ್ಭಿಕ ಚಿತ್ರ (credit: AFP)

ಪ್ಯಾರಿಸ್,ಜು.30: ಫೆಲೆಸ್ತೀನ್ ಗೆ ರಾಷ್ಟ್ರದ ಮಾನ್ಯತೆಯನ್ನು ನೀಡುವಂತೆ ಫ್ರಾನ್ಸ್ ಹಾಗೂ ಇತರ 14 ಪಾಶ್ಚಾತ್ಯ ರಾಷ್ಟ್ರಗಳು ಜಗತ್ತಿನಾದ್ಯಂತದ ದೇಶಗಳಿಗೆ ಕರೆ ನೀಡಿವೆಯೆಂದು ಫ್ರಾನ್ಸ್‌ ನ ಉನ್ನತ ರಾಜತಾಂತ್ರಿಕರೊಬ್ಬರು ಬುಧವಾರ ತಿಳಿಸಿದ್ದಾರೆ.

ನ್ಯೂಯಾರ್ಕ್ ನಲ್ಲಿ ಮಂಗಳವಾರ ನಡೆದ ಸಮಾವೇಶವೊಂದರ ಬಳಿಕ 15 ದೇಶಗಳ ವಿದೇಶಾಂಗ ಸಚಿವರು ಹೊರಡಿಸಿದ ಜಂಟಿ ಹೇಳಿಕೆಯೊಂದರಲ್ಲಿ ಈ ಕರೆಯನ್ನು ನೀಡಲಾಗಿದೆ. ಫ್ರಾನ್ಸ್ ಹಾಗೂ ಸೌದಿ ಆರೇಬಿಯ ಸಹಅಧ್ಯಕ್ಷತೆಯ ಈ ಸಮಾವೇಶವು ಇಸ್ರೇಲಿಗರು ಹಾಗೂ ಫೆಲೆಸ್ತೀನಿಯರ ನಡುವಿನ ಬಿಕ್ಕಟ್ಟನ್ನು ಬಗೆಹರಿಸಲು ದ್ವಿರಾಷ್ಟ್ರ ಪರಿಹಾರ ಸೂತ್ರವನ್ನು ಪುನರುಜ್ಜೀವನಗೊಳಿಸುವ ಉದ್ದೇಶವನ್ನು ಈ ಸಮಾವೇಶವು ಹೊಂದಿದೆ.

ನ್ಯೂಯಾರ್ಕ್ ನಲ್ಲಿ , ಇತರ 14 ರಾಷ್ಟ್ರಗಳ ಜೊತೆಗೂಡಿ ಫ್ರಾನ್ಸ್ ಸಾಮೂಹಿಕವಾಗಿ ಮನವಿಯೊಂದನ್ನು ಹೊರಡಿಸಿದೆ. ‘‘ಫೆಲೆಸ್ತೀನ್ ರಾಷ್ಟ್ರಕ್ಕೆ ಮಾನ್ಯತೆ ನೀಡುವ ನಮ್ಮ ಆಶಯವನ್ನು ನಾವು ವ್ಯಕ್ತಪಡಿಸುತ್ತೇವೆ. ಈ ವಿಚಾರವಾಗಿ ಇನ್ನೂ ಜೊತೆಗೂಡದ ಇತರರನ್ನು ಕೂಡಾ ನಮ್ಮೊಂದಿಗೆ ಕೈಜೋಡಿಸುವಂತೆ ಆಹ್ವಾನಿಸುತ್ತಿದ್ದೇವೆ’’ ಎಂದು ವಿದೇಶಾಂಗ ಸಚಿವ ಜೀನ್-ನೋಯಲ್ ಬ್ಯಾರೊಟ್ ಎಕ್ಸ್ನಲ್ಲಿ ಹೇಳಿದ್ದಾರೆ.

ಮಂಗಳವಾರ ಪ್ರಕಟಿಸಿದ ಹೇಳಿಕೆಯಲ್ಲಿ ಸ್ಪೇನ್, ನಾರ್ವೆ ಹಾಗೂ ಫಿನ್ಲ್ಯಾಂಡ್ ಸೇರಿದಂತೆ 15 ರಾಷ್ಟ್ರಗಳು, ಇಸ್ರೇಲ್-ಫೆಲೆಸ್ತೀನ್ ಬಿಕ್ಕಟ್ಟಿಗೆ ದ್ವಿರಾಷ್ಟ್ರ ಸೂತ್ರದ ಮೂಲಕ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಅಚಲ ಬೆಂಬಲವನ್ನು ಘೋಷಿಸಿದ್ದಾರೆ.

ಫೆಲೆಸ್ತೀನ್ಗೆ ಅಧಿಕೃತವಾಗಿ ರಾಷ್ಟ್ರದ ಸ್ಥಾನಮಾನವನ್ನು ನೀಡುವುದಾಗಿ ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೊನ್ ಕಳೆದ ವಾರ ಪ್ರಕಟಿಸಿದ್ದರು. ಇದಕ್ಕೆ ಇಸ್ರೇಲ್ ಹಾಗೂ ಅಮೆರಿಕದಿಂದ ಬಲವಾದ ವಿರೋಧ ವ್ಯಕ್ತವಾಗಿತ್ತು.

ಮಂಗಳವಾರ ಬ್ರಿಟಿಶ್ ಪ್ರಧಾನಿ ಕೀರ್ ಸ್ಟ್ರಾಮರ್ ಅವರು ಮಂಗಳವಾರ ಹೇಳಿಕೆಯೊಂದನ್ನು ನೀಡಿ, ಗಾಝಾದಲ್ಲಿ ಕದನವಿರಾಮಕ್ಕೆ ಸಮ್ಮತಿ ಸೇರಿದಂತೆ ಇಸ್ರೇಲ್ ಹಲವಾರು ಮಹತ್ವದ ಕ್ರಮಗಳನ್ನು ಕೈಗೊಳ್ಳದೆ ಇದ್ದಲ್ಲಿ ಸೆಪ್ಟೆಂಬರ್‌ ನಲ್ಲಿ ಫೆಲೆಸ್ತೀನ್ ರಾಷ್ಟ್ರದ ಮಾನ್ಯತೆಯನ್ನು ನೀಡುವುದಾಗಿ ಘೋಷಿಸಿದ್ದರು.

ಇದರೊಂದಿಗೆ ಜಿ7 ಮೈತ್ರಿಕೂಟದ ಎರಡು ಯುರೋಪಿಯನ್ ಸದಸ್ಯ ರಾಷ್ಟ್ರಗಳು ಫೆಲೆಸ್ತೀನ್ ರಾಷ್ಟ್ರ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸಿದಂತಾಗಿದೆ. ಆಸ್ಟ್ರೇಲಿಯ, ಕೆನಡ ಹಾಗೂ ನ್ಯೂಝಿಲ್ಯಾಂಡ್ ಸೇರಿದಂತೆ ಹೇಳಿಕೆಗೆ ಸಹಿಹಾಕಿದ ಇತರ 9 ದೇಶಗಳು. ಫೆಲೆಸ್ತೀನ್ ಗೆ ಈವರೆಗೆ ರಾಷ್ಟ್ರದ ಮಾನ್ಯತೆಯನ್ನು ನೀಡಿರಲಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News