ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಫೆಲೆಸ್ತೀನ್ ಧ್ವಜ ಹಾರಿಸಲು ಅವಕಾಶ
World Health Organization (WHO)
ಜಿನೆವಾ: ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ತಮ್ಮ ಧ್ವಜವನ್ನು ಹಾರಿಸುವ ಹಕ್ಕನ್ನು ಪಡೆಯುವಲ್ಲಿ ಫೆಲೆಸ್ತೀನ್ ನ ನಿಯೋಗ ಸೋಮವಾರ ಯಶಸ್ವಿಯಾಗಿದೆ.
ಈ ನಿರ್ಣಯವನ್ನು ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಅಧಿವೇಶನದಲ್ಲಿ ಚೀನಾ, ಪಾಕಿಸ್ತಾನ, ಸೌದಿ ಅರೆಬಿಯಾ ಹಾಗೂ ಇತರ ದೇಶಗಳು ಮಂಡಿಸಿದ್ದವು. ನಿರ್ಣಯವನ್ನು 95-4 ಮತಗಳಿಂದ ಅಂಗೀಕರಿಸಲಾಗಿದ್ದು 27 ದೇಶಗಳು ಮತದಾನದಿಂದ ದೂರ ಉಳಿದಿವೆ. ಇಸ್ರೇಲ್, ಹಂಗರಿ, ಝೆಕ್ ಗಣರಾಜ್ಯ ಮತ್ತು ಜರ್ಮನಿ ವಿರುದ್ಧ ಮತ ಚಲಾಯಿಸಿವೆ. ನಿರ್ಣಯವನ್ನು ವಿರೋಧಿಸಿದ ಇಸ್ರೇಲ್ ಮತ ಚಲಾಯಿಸಲು ಆಗ್ರಹಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆಯಿಂದ ನಿರ್ಗಮಿಸುವುದಾಗಿ ಹೇಳಿರುವ ಇಸ್ರೇಲ್ ನ ನಿಕಟ ಮಿತ್ರ ಅಮೆರಿಕ ಮತದಾನದಲ್ಲಿ ಭಾಗವಹಿಸಲಿಲ್ಲ. ಫೆಲೆಸ್ತೀನ್ ರಾಷ್ಟ್ರಕ್ಕೆ ಸುಮಾರು 150 ದೇಶಗಳು ಮಾನ್ಯತೆ ನೀಡಿದ್ದರೂ ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಜಪಾನ್ ಸೇರಿದಂತೆ ಪ್ರಮುಖ ದೇಶಗಳು ಮಾನ್ಯತೆ ನೀಡಿಲ್ಲ.
ಇದು ಸಾಂಕೇತಿಕ ಕ್ರಿಯೆಯಾಗಿದೆ. ಆರೋಗ್ಯ ಅಗತ್ಯಗಳಿಗೆ ಸಹಾಯ ಮಾಡಲು ನಾವು ಅಂತರಾಷ್ಟ್ರೀಯ ಸಮುದಾಯದ ಭಾಗವಾಗಿದೆ ಎಂಬುದನ್ನು ಸಂಕೇತಿಸುತ್ತದೆ. ನಾವು ಶೀಘ್ರದಲ್ಲೇ ವಿಶ್ವಸಂಸ್ಥೆ ಮತ್ತು ಎಲ್ಲಾ ವಿಶ್ವಸಂಸ್ಥೆ ವೇದಿಕೆಗಳ ಸಂಪೂರ್ಣ ಸದಸ್ಯತ್ವವನ್ನು ಹೊಂದುವುದಾಗಿ ನಿರೀಕ್ಷಿಸುತ್ತಿದ್ದೇವೆ' ಎಂದು ವಿಶ್ವಸಂಸ್ಥೆಗೆ ಫೆಲೆಸ್ತೀನಿಯನ್ ರಾಯಭಾರಿ ಇಬ್ರಾಹಿಂ ಕ್ರೈಶಿ ಹೇಳಿರುವುದಾಗಿ `ರಾಯ್ಟರ್ಸ್' ವರದಿ ಮಾಡಿದೆ.