×
Ad

ಪಪುವಾ ನ್ಯೂಗಿನಿಯಾ: ಭೂಕುಸಿತದಲ್ಲಿ ಮೃತರ ಸಂಖ್ಯೆ 670ಕ್ಕೆ ಏರಿಕೆ

Update: 2024-05-26 21:57 IST

PC : timesofindia

ಪೋರ್ಟ್ ಮೋರೆಸ್ಬಿ : ಪಪುವಾ ನ್ಯೂಗಿನಿಯಾದಲ್ಲಿ ಶುಕ್ರವಾರ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 670ಕ್ಕೆ ಏರಿದ್ದು 150ಕ್ಕೂ ಅಧಿಕ ಮನೆಗಳು ನೆಲಸಮಗೊಂಡಿವೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ರವಿವಾರ ವರದಿ ಮಾಡಿದೆ.

ದ್ವೀಪರಾಷ್ಟ್ರದ ಉತ್ತರದಲ್ಲಿರುವ ಎಂಗಾ ಪ್ರಾಂತದ ಯಂಬಾಲಿ ಹಳ್ಳಿಯ ಬೆಟ್ಟಪ್ರದೇಶಗಳಲ್ಲಿ ಶುಕ್ರವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 3 ಗಂಟೆಗೆ ಭೂಕುಸಿತ ಸಂಭವಿಸಿದ್ದು ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲೂ ಅಪಾರ ಸಾವು-ನೋವು, ನಾಶ ನಷ್ಟ ಸಂಭವಿಸಿದೆ. ಶೋಧ ಮತ್ತು ರಕ್ಷಣಾ ತಂಡದ ಕಾರ್ಯಾಚರಣೆಯಲ್ಲಿ ಮಣ್ಣಿನಡಿ ಸಮಾಧಿಯಾಗಿದ್ದ ಹಲವು ದೇಹಗಳನ್ನು ಮೇಲೆತ್ತಲಾಗಿದೆ. ಸುಮಾರು 150 ಮನೆಗಳು ಮಣ್ಣಿನಡಿ ಹೂತುಹೋಗಿರುವುದಾಗಿ ಅಂದಾಜಿಸಲಾಗಿದೆ. ಹಲವೆಡೆ ಇನ್ನೂ ಕುಸಿತ ಮುಂದುವರಿದಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದ್ದು ಸಾವು-ನೋವಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ವಲಸೆ ಏಜೆನ್ಸಿ ಅಧಿಕಾರಿ ಸೆರ್ಹಾನ್ ಅಕ್ಟೋಪ್ರಾಕ್ ರವಿವಾರ ಮಾಹಿತಿ ನೀಡಿದ್ದಾರೆ.

ಇದೊಂದು ಅಸಾಮಾನ್ಯ ಪ್ರಾಕೃತಿಕ ದುರಂತವಾಗಿದ್ದು 1 ಸಾವಿರಕ್ಕೂ ಅಧಿಕ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಹಲವೆಡೆ ಕೃಷಿ ತೋಟಗಳು ರಾತ್ರಿ ಬೆಳಗಾಗುವುದರಲ್ಲಿ ಭೂಮಿಯ ಒಡಲನ್ನು ಸೇರಿದ್ದು ಅಪಾರ ನಷ್ಟ ಸಂಭವಿಸಿದೆ. ನೀರು ಪೂರೈಕೆ ವ್ಯವಸ್ಥೆಗೆ ಹಾನಿಯಾಗಿದ್ದು ಹಲವೆಡೆ ಕುಡಿಯುವ ನೀರಿನ ಕೊರತೆ ಎದುರಾಗಿದೆ ಎಂದು ಪ್ರಧಾನಿ ಜೇಮ್ಸ್ ಮರಾಪೆ ಹೇಳಿದ್ದಾರೆ.

ಭೂಕುಸಿತದ ಸ್ಥಳದಿಂದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಎಲ್ಲೆಡೆ ಕಲ್ಲು, ಮಣ್ಣು, ಕುಸಿದು ಬಿದ್ದ ಮರಗಳು, ತ್ಯಾಜ್ಯಗಳು ರಾಶಿ ಬಿದ್ದಿರುವುದರಿಂದ ರಸ್ತೆ ಸಂಚಾರ ಬಹುತೇಕ ಮೊಟಕುಗೊಂಡಿರುವುದರಿಂದ ಸ್ಥಳಾಂತರ ಪ್ರಕ್ರಿಯೆ ಮತ್ತು ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ ಎಂದು ಮಾನವೀಯ ನೆರವಿನ ಏಜೆನ್ಸಿ `ಕ್ಯಾರ್ ಇಂಟರ್ ನ್ಯಾಷನಲ್' ನ ಸ್ಥಳೀಯ ನಿರ್ದೇಶಕರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News