×
Ad

ಪಪುವಾ ನ್ಯೂಗಿನಿಯಾ ಹಿಂಸಾಚಾರ: ಕನಿಷ್ಠ 53 ಪುರುಷರ ಸಾಮೂಹಿಕ ಹತ್ಯೆ

Update: 2024-02-20 21:45 IST

Photo: AFP

ಮೆಲ್ಬೋರ್ನ್: ಪಪುವಾ ನ್ಯೂಗಿನಿಯಾ ದೇಶದಲ್ಲಿ ಬುಡಕಟ್ಟು ಹಿಂಸಾಚಾರ ಉಲ್ಬಣಿಸಿದ್ದು ಕನಿಷ್ಠ 53 ಪುರುಷರನ್ನು ಸಾಮೂಹಿಕ ಹತ್ಯೆ ಮಾಡಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

ಒಂದು ಬುಡಕಟ್ಟಿನ ಜನರು ಬಾಡಿಗೆ ಸಿಪಾಯಿಗಳೊಂದಿಗೆ ನೆರೆಯ ಮತ್ತೊಂದು ಬುಡಕಟ್ಟಿನ ಮೇಲೆ ದಾಳಿ ನಡೆಸಲು ತೆರಳುತ್ತಿದ್ದಾಗ ಅವರ ಮೇಲೆ ಹೊಂಚುದಾಳಿ ನಡೆದಿದೆ. ಹಠಾತ್ ದಾಳಿಯಿಂದಾಗಿ ಕನಿಷ್ಠ 53 ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದು ಗಾಯಗೊಂಡವರು ಸಮೀಪದ ಅರಣ್ಯಕ್ಕೆ ಓಡಿ ತಪ್ಪಿಸಿಕೊಂಡಿದ್ದಾರೆ ಎಂದು ಪಪುವಾ ನ್ಯೂಗಿನಿಯಾ ಪೊಲೀಸ್ ಇಲಾಖೆಯ ಕಾರ್ಯನಿರ್ವಾಹಕ ಅಧೀಕ್ಷಕ ಜಾರ್ಜ್ ಕಕಾಸ್ರನ್ನು ಉಲ್ಲೇಖಿಸಿ ಆಸ್ಟ್ರೇಲಿಯನ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.

ಘರ್ಷಣೆ ನಡೆದ ಸ್ಥಳದಲ್ಲಿ ಮತ್ತು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೇಹಗಳನ್ನು ಟ್ರ,ಕ್ಗಳಲ್ಲಿ ತುಂಬಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕಾಡಿಗೆ ಓಡಿ ತಪ್ಪಿಸಿಕೊಂಡವರಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿರುವ ಮಾಹಿತಿಯಿದ್ದು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಕಕಾಸ್ ಹೇಳಿದ್ದಾರೆ.

ಪಪುವಾ ನ್ಯೂಗಿನಿಯಾವು ದಕ್ಷಿಣ ಪೆಸಿಫಿಕ್ನ ಆಯಕಟ್ಟಿನ ಪ್ರಮುಖ ದೇಶವಾಗಿದ್ದು 10 ದಶಲಕ್ಷ ಜನರನ್ನು ಹೊಂದಿರುವ ಅಭಿವೃದ್ಧಿಶೀಲ ದೇಶವಾಗಿದೆ. 2022ರ ಚುನಾವಣೆಯಲ್ಲಿ ಪ್ರಧಾನಿ ಜೇಮ್ಸ್ ಮರಾಪೆಯ ಸರಕಾರ ಅಧಿಕಾರ ಉಳಿಸಿಕೊಂಡ ಬೆನ್ನಲ್ಲೇ ಎಂಗಾ ವಲಯದಲ್ಲಿ ಬುಡಕಟ್ಟು ಹಿಂಸಾಚಾರ ಭುಗಿಲೆದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News