×
Ad

ಭೀಕರ ಭೂಕಂಪಕ್ಕೆ ನಡುಗಿದ ಫಿಲಿಪ್ಪೀನ್ಸ್; 20 ಮಂದಿ ಮೃತ್ಯು

Update: 2025-10-01 07:55 IST

PC: x.com/JamesHartline

ಮನಿಲಾ: ಕೇಂದ್ರ ಫಿಲಿಪ್ಪೀನ್ಸ್ ಪ್ರದೇಶದಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.9ರಷ್ಟಿತ್ತು ಎಂದು ಎಪಿ ವರದಿ ಮಾಡಿದೆ.

ಬೋಗೊ ಪಟ್ಟಣದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ. ಭೂಕಂಪದ ವೇಳೆ ಸಂಭವಿಸಿದ ಭೀಕರ ಭೂಕುಸಿತ ಹಾಗೂ ಕಲ್ಲುಬಂಡೆಗಳ ಕುಸಿತದಿಂದ ಹಲವು ಗುಂಪು ಗುಡಿಸಲುಗಳಿಗೆ ಹಾನಿಯಾಗಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯದ ಪ್ರಯತ್ನಗಳು ಮುಂದುವರಿದಿವೆ ಎಂದು ವಿಕೋಪ ಪರಿಹಾರ ಅಧಿಕಾರಿ ರೆಕ್ಸ್ ಯೋಟ್ ಹೇಳಿದ್ದಾರೆ.

ಸಾನ್ ರೆಮಿಗಿಯೊ ಪ್ರದೇಶದ ಕಬಗ್ ಮಹನಗರ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಸಂತ್ರಸ್ತರ ಗುರುತು ಪತ್ತೆಯಾಗಿಲ್ಲ. ಭೀಕರ ಭೂಕಂಪದಿಂದ ಭೀತಿಗೊಂಡ ಜನ ದಿಕ್ಕಾಪಾಲಾಗಿ ಓಡಿದರು. ಕಲ್ಲಿನ ಚರ್ಚ್ ಒಂದಕ್ಕೆ ಹಾನಿಯಾಗಿದ್ದು, ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಅಮೆರಿಕನ್ ಜಿಯೊಲಾಜಿಕಲ್ ಸರ್ವೆ ಪ್ರಕಾರ ಈ ಭೂಕಂಪದ ಕೇಂದ್ರ ಬಿಂದು ಭೊಹೋಲ್ ಪ್ರಾಂತ್ಯದ ಕಲಪ್ನ 11 ಕಿಲೋಮೀಟರ್ ಆಗ್ನೇಯಕ್ಕೆ ಇತ್ತು. ಈ ಪ್ರದೇಶದಲ್ಲಿ ಸುಮರು 33 ಸಾವಿರ ಮಂದಿ ವಾಸವಿದ್ದಾರೆ.

ಸಾಗರ ಮಟ್ಟದಲ್ಲಿ ಅಲ್ಪಪ್ರಮಾಣದ ಪ್ರಕ್ಷುಬ್ಧತೆಯ ಸಾಧ್ಯತೆಯನ್ನು ಸ್ಥಳೀಯ ಭೂಕಂಪ ಮಾಪನ ಅಧಿಕಾರಿಗಳು ಅಂದಾಜಿಸಿದ್ದಾರೆ. ತೀರ ಪ್ರದೇಶದ ಜನರು ಕಡಲ ಬದಿಗೆ ಅಥವಾ ಕರಾವಳಿಗೆ ಹೋಗದಂತೆ ಮುನ್ನೆಚ್ಚರಿಕೆ ನೀಡಿದ್ದಾರೆ. ಭೂಕಂಪದಿಂದ ಸುನಾಮಿ ಭೀತಿ ಇಲ್ಲ ಎಂದು ಸುನಾಮಿ ಎಚ್ಚರಿಕೆ ಕೇಂದ್ರ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News