“ನಾನು ನನ್ನ ಪುತ್ರನ ಉತ್ತಮ ಭವಿಷ್ಯವನ್ನಷ್ಟೆ ಬಯಸಿದ್ದೆ”: ಅಮೆರಿಕದಿಂದ ಗಡಿಪಾರಿಗೊಳಗಾಗಿರುವ ಮಹಿಳೆಯ ಅಳಲು
ಸಾಂದರ್ಭಿಕ ಚಿತ್ರ
ಲೂಧಿಯಾನ: “ನಾನು ನನ್ನ ಪುತ್ರನಿಗಾಗಿ ಉತ್ತಮ ಜೀವನ ಹಾಗೂ ಅವಕಾಶಗಳನ್ನು ಬಯಸಿದ್ದೆ” ಎಂದು ಡಂಕಿ ಮಾರ್ಗವಾಗಿ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ ವಿಚ್ಛೇದಿತೆ ಹಾಗೂ 13 ವರ್ಷದ ಪುತ್ರನ ಏಕೈಕ ಪೋಷಕಿಯೊಬ್ಬರು ಅಮೆರಿಕದಿಂದ ಗಡಿಪಾರಿಗೊಳಗಾದ ನಂತರ ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಾಲ್ಕು ದಿನಗಳ ಹಿಂದೆ ಅಮೆರಿಕದಿಂದ ಗಡಿಪಾರಿಗೊಳಗಾಗಿರುವ 112 ಮಂದಿ ಅಕ್ರಮ ವಲಸಿಗ ಭಾರತೀಯರನ್ನು ಹೊತ್ತು ಅಮೃತಸರದಲ್ಲಿ ಬಂದಿಳಿದಿದ್ದ ವಿಮಾನದಲ್ಲಿ ಪಂಜಾಬ್ ನ ಲೂಧಿಯಾನ ಜಿಲ್ಲೆಯ ನಿವಾಸಿಯಾದ 39 ವರ್ಷದ ಈ ಮಹಿಳೆಯೂ ಸೇರಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಆಕೆ, “ನಾನೀಗಲೂ ಮಾನಸಿಕ ಆಘಾತದಲ್ಲಿದ್ದೇನೆ” ಎಂದು ಅವರು ಹೇಳಿಕೊಂಡಿದ್ದಾರೆ.
“ನಾನು ನನ್ನ ಪುತ್ರನಿಗಾಗಿ ಸಂಭಾವಿತ ಜೀವನ ಬಯಸಿದ್ದು ತಪ್ಪೆ? ನಾನೊಬ್ಬಳು ವಿಚ್ಛೇದಿತೆಯಾಗಿದ್ದು, ನಾನು ಸಣ್ಣವಳಿರುವಾಗಲೇ ನನ್ನ ಪೋಷಕರು ತೀರಿಕೊಂಡರು. ನಾನು 12ನೇ ತರಗತಿಯಲ್ಲಿ ತೇರ್ಗಡೆಯಾಗಿದ್ದು, ಇಲ್ಲಿ ಸಂಭಾವಿತ ಉದ್ಯೋಗ ಹುಡುಕುವಲ್ಲಿ ವಿಫಲಗೊಂಡೆ. ಹೀಗಾಗಿ ನಾನು ಅಮೆರಿಕಕ್ಕೆ ತೆರಳಿ, ಅಲ್ಲಿ ಕೆಲಸ ಗಿಟ್ಟಿಸಿ, ನನ್ನ ಪುತ್ರನ ಜೀವನವನ್ನು ಸರಾಗಗೊಳಿಸಲು ಬಯಸಿದೆ. ನಾನು ಅಲ್ಲಿ ನೆಲೆ ನಿಂತ ನಂತರ, ಆತನನ್ನು ಕಾನೂನುಬದ್ಧವಾಗಿ ಅಮೆರಿಕಕ್ಕೆ ಕರೆಸಿಕೊಳ್ಳಲು ಬಯಸಿದ್ದೆ” ಎಂದು ಹೆಸರೇಳಲಿಚ್ಛಿಸದ ಆ ಮಹಿಳೆ ಕಣ್ಣೀರಾಗಿದ್ದಾರೆ.
ನಾನು ಇದಕ್ಕೂ ಮುನ್ನ ಬ್ರಿಟನ್ ಹಾಗೂ ಕೆನಡಾಗಳಿಂದ ವೀಸಾ ನಿರಾಕರಣೆಗೊಳಗಾಗಿದ್ದೆ ಎಂಬ ಸಂಗತಿಯನ್ನು ಆಕೆ ಬಹಿರಂಗಗೊಳಿಸಿದ್ದಾರೆ.
ನಾನು ಅಮೆರಿಕ-ಮೆಕ್ಸಿಕೊ ಗಡಿಗೆ ತಲುಪಲು ನೆದರ್ ಲ್ಯಾಂಡ್ಸ್, ಇಟಲಿ, ಸ್ಪೇನ್, ಗ್ವಾಟೆಮಾಲ ಹಾಗೂ ತಿಜೌನಾ ಸೇರಿದಂತೆ ಹಲವು ದೇಶಗಳ ಮೂಲಕ ನನ್ನ ಪ್ರಯಾಣವನ್ನು ವ್ಯವಸ್ಥೆಗೊಳಿಸಿದ್ದ ನನ್ನ ಪ್ರವಾಸಿ ಏಜೆಂಟ್ ಗೆ ನಾನು 45 ಲಕ್ಷ ರೂ. ಪಾವತಿಸಿದ್ದೆ ಎಂದು ಆಕೆ ಹೇಳಿದ್ದಾರೆ. ಆಕೆ ಜನವರಿ 29ರಂದು ಅಮೆರಿಕ ಗಡಿಯನ್ನು ದಾಟಿದ್ದರಾದರೂ, ಕೆಲವೇ ದಿನಗಳಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದ್ದರು.
ನಾನು ನನ್ನ ಪ್ರವಾಸಿ ಏಜೆಂಟ್ ಗೆ 45 ಲಕ್ಷ ರೂ. ಪಾವತಿಸಲು ನನ್ನ ಆಸ್ತಿಯನ್ನು ಮಾರಾಟ ಮಾಡಿ, ನನ್ನ ಸಂಬಂಧಿಕರಿಂದ ಸಾಲ ಪಡೆದಿದ್ದೆ ಎಂದೂ ಹೇಳಿರುವ ಆಕೆ, “ಒಂದು ವೇಳೆ ನನ್ನ ಏಜೆಂಟರೇನಾದರೂ ನನ್ನ ಹಣವನ್ನು ಮರಳಿಸಲು ವಿಫಲರಾದರೆ, ನಾನು ಅದನ್ನು ವಾಪಸು ಪಡೆಯುವವರೆಗೂ ಹೋರಾಟ ನಡೆಸುತ್ತೇನೆ” ಎಂದು ಪುನರುಚ್ಚರಿಸಿದ್ದಾರೆ.