ಬ್ರಿಕ್ಸ್ ಶೃಂಗಸಭೆಯಿಂದ ಹಿಂದೆ ಸರಿದ ಪುಟಿನ್

Update: 2023-09-03 18:30 GMT
Editor : musaveer | Byline : Saleeth Sufiyan

ವ್ಲಾದಿಮಿರ್ ಪುಟಿನ್ | Photo : pti

ಜೊಹಾನ್ಸನ್: ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಬ್ರಿಕ್ಸ್ ದೇಶಗಳ ಶೃಂಗಸಭೆಯಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಾಲ್ಗೊಳ್ಳುವುದಿಲ್ಲ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಮಕ್ಕಳನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ ಆರೋಪದಲ್ಲಿ ಪುಟಿನ್ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಬಂಧನ ವಾರಂಟ್ ಜಾರಿಗೊಳಿಸಿದೆ. ಆದ್ದರಿಂದ ಅವರು ದಕ್ಷಿಣ ಆಫ್ರಿಕಾಕ್ಕೆ ಬಂದರೆ ಅವರನ್ನು ಬಂಧಿಸಿ ಐಸಿಸಿಗೆ ಹಸ್ತಾಂತರಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಆದರೆ ಇದನ್ನು ವಿರೋಧಿಸಿದ್ದ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೋಸ, ಒಂದು ವೇಳೆ ಪುಟಿನ್‍ರನ್ನು ಬಂಧಿಸಿದರೆ ಅದು ರಶ್ಯದ ವಿರುದ್ಧ ಯುದ್ಧ ಸಾರಿದಂತಾಗುತ್ತದೆ ಎಂದಿದ್ದರು. ಬ್ರಿಕ್ಸ್ ಶೃಂಗಸಭೆಗೆ ಪುಟಿನ್‍ರ ಆಗಮನ ದಕ್ಷಿಣ ಆಫ್ರಿಕಾಕ್ಕೆ ನುಂಗಲಾರದ ಬಿಸಿತುಪ್ಪದಂತೆ ಇಕ್ಕಟ್ಟಿಗೆ ಕಾರಣವಾಗಿತ್ತು.

ಕಳೆದ ಕೆಲ ದಿನಗಳಿಂದ ದಕ್ಷಿಣ ಆಫ್ರಿಕಾ ಮತ್ತು ರಶ್ಯದ ನಡುವೆ ನಿರಂತರ ಸಂವಾದ, ಚರ್ಚೆಯ ಬಳಿಕ ಪರಸ್ಪರ ಒಪ್ಪಂದದ ಹಿನ್ನೆಲೆಯಲ್ಲಿ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರಲು ಪುಟಿನ್ ನಿರ್ಧರಿಸಿದ್ದು ಅವರ ಬದಲು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಪಾಲ್ಗೊಳ್ಳಲಿದ್ದಾರೆ ಎಂದು ದ.ಆಫ್ರಿಕಾ ಅಧ್ಯಕ್ಷರ ವಕ್ತಾರ ವಿನ್ಸೆಂಟ್ ಮಗ್ವೆನ್ಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - Saleeth Sufiyan

contributor

Similar News