×
Ad

ಪರಮಾಣು ಪರೀಕ್ಷಾ ನಿಷೇಧ ಒಪ್ಪಂದದ ಅನುಮೋದನೆ ರದ್ದುಪಡಿಸಿದ ಪುಟಿನ್

Update: 2023-11-02 22:18 IST

ವ್ಲಾದಿಮಿರ್‌ ಪುಟಿನ್‌ (PTI)

ಮಾಸ್ಕೊ: ಸಮಗ್ರ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದಕ್ಕೆ ರಶ್ಯ ನೀಡಿದ್ದ ಅನುಮೋದನೆಯನ್ನು ಹಿಂದಕ್ಕೆ ಪಡೆಯುವ ಕಾನೂನಿಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.

1996ರ ಒಪ್ಪಂದವು ಪರಮಾಣು ಶಸ್ತ್ರಾಸ್ತ್ರಗಳ ನೇರ ಪರೀಕ್ಷೆಗಳನ್ನು ಒಳಗೊಂಡಂತೆ ಎಲ್ಲಾ ಪರಮಾಣು ಸ್ಫೋಟಗಳನ್ನು ನಿಷೇಧಿಸುತ್ತದೆ. ಆದರೆ ಅಮೆರಿಕ, ಚೀನಾದಂತಹ ಕೆಲವು ಪ್ರಮುಖ ದೇಶಗಳು ಅದನ್ನು ಅನುಮೋದಿಸಿಲ್ಲದ ಕಾರಣ ಈ ಒಪ್ಪಂದ ಜಾರಿಗೆ ಬಂದಿಲ್ಲ.

ರಶ್ಯದ ಸಂಸತ್‍ನ ತುರ್ತು ಅಧಿವೇಶನದಲ್ಲಿ ಅನುಮೋದನೆ ರದ್ದುಗೊಳಿಸುವ ಮಸೂದೆಗೆ ಅಂಗೀಕಾರ ದೊರಕಿತ್ತು. ಪರಮಾಣು ಅಸ್ತ್ರಗಳ ಬಗ್ಗೆ ಅಮೆರಿಕದ ಸಿನಿಕತನ ಮತ್ತು ಒರಟು ವರ್ತನೆಗೆ ಪ್ರತಿಯಾಗಿ ರಶ್ಯ ಈ ಕ್ರಮ ಕೈಗೊಂಡಿದೆ ಎಂದು ಸಂಸತ್ ಸ್ಪೀಕರ್ ವ್ಯಾಚೆಸ್ಲಾವ್ ವೊಲೊದಿನ್ ಹೇಳಿದ್ದಾರೆ. ಈ ಒಪ್ಪಂದ ಜಾರಿಗೆ ಬಂದಿಲ್ಲವಾದರೂ ಫ್ರಾನ್ಸ್, ಬ್ರಿಟನ್ ಸೇರಿದಂತೆ 178 ದೇಶಗಳು ಇದಕ್ಕೆ ಅನುಮೋದನೆ ನೀಡಿದ್ದವು.

ಕಳೆದ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಆಕ್ರಮಣವನ್ನು ಆರಂಭಿಸಿದಾಗಿನಿಂದ ರಶ್ಯವು ಪರಮಾಣು ದಾಳಿಯ ಬೆದರಿಕೆ ಒಡ್ಡುತ್ತಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಪಾಶ್ಚಿಮಾತ್ಯ ದೇಶಗಳು ಆರೋಪಿಸಿವೆ. ಕಳೆದ ವಾರ ಪುಟಿನ್ ಉಪಸ್ಥಿತಿಯಲ್ಲಿ ರಶ್ಯದ ರಕ್ಷಣಾ ಪಡೆ ಬ್ಯಾಲಿಸ್ಟಿಕ್ ಕ್ಷಿಪಣಿ ಕವಾಯತು ನಡೆಸಿದ್ದು ಇದು `ಹೆಸರಿಸದ ಶತ್ರುಗಳ ವಿರುದ್ಧ ಬೃಹತ್ ಪ್ರತೀಕಾರದ ಪರಮಾಣು ದಾಳಿಯಾಗಿದೆ' ಎಂದು ರಕ್ಷಣಾ ಸಚಿವ ಸೆರ್ಗೆಯ್ ಶೊಯಿಗು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News