ರಫೇಲ್ ಯುದ್ಧವಿಮಾನಕ್ಕೆ ಅಪಖ್ಯಾತಿ ತರಲು ಚೀನಾ ಪ್ರಯತ್ನ; ತಪ್ಪು ಮಾಹಿತಿ ಅಭಿಯಾನಕ್ಕೆ ರಾಯಭಾರಿ ಕಚೇರಿ ಬಳಕೆ: ವರದಿ
ರಫೇಲ್ ಯುದ್ಧವಿಮಾನ | PC : PTI
ಪ್ಯಾರಿಸ್: ಭಾರತದ ` ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಬಳಿಕ ರಫೇಲ್ ಯುದ್ಧವಿಮಾನದ ವಿರುದ್ಧ ಚೀನಾವು ತನ್ನ ರಾಯಭಾರಿ ಕಚೇರಿಯನ್ನು ಬಳಸಿಕೊಂಡು ತಪ್ಪು ಮಾಹಿತಿ ಪ್ರಸಾರ ಅಭಿಯಾನವನ್ನು ಆರಂಭಿಸಿದೆ ಎಂದು ಫ್ರಾನ್ಸ್ ನ ಮಿಲಿಟರಿ ಹಾಗೂ ಗುಪ್ತಚರ ಅಧಿಕಾರಿಗಳನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.
ಫ್ರಾನ್ಸ್ ನಿರ್ಮಿತ ಅತ್ಯಾಧುನಿಕ ರಫೇಲ್ ಯುದ್ಧವಿಮಾನಕ್ಕೆ ಅಪಖ್ಯಾತಿ ತರುವುದು ಚೀನಾದ ಉದ್ದೇಶವಾಗಿದೆ. ಈ ವಿಮಾನಗಳ ಖರೀದಿಗೆ ಮುಂದಾಗಿರುವ ದೇಶಗಳ ಮೇಲೆ ತನ್ನ ರಾಯಭಾರಿ ಕಚೇರಿಯ ಮೂಲಕ ಪ್ರಭಾವ ಬೀರಿ, ರಫೇಲ್ ಖರೀದಿಸದಂತೆ ಮತ್ತು ಚೀನೀ ನಿರ್ಮಿತ ಯುದ್ಧ ವಿಮಾನಗಳನ್ನು ಖರೀದಿಸಲು ಮನ ಒಲಿಸುವ ಪ್ರಯತ್ನ ಸಾಗಿದೆ.
ಭಾರತೀಯ ವಾಯುಪಡೆ ಬಳಸಿದ ರಫೇಲ್‍ಗಳು ಕಳಪೆ ನಿರ್ವಹಣೆ ತೋರಿದೆ ಎಂದು ಚೀನಾ ರಾಯಭಾರಿ ಕಚೇರಿಯ ಉನ್ನತ ಮಿಲಿಟರಿ ಅಧಿಕಾರಿಗಳು ಇತರ ದೇಶಗಳ ಭದ್ರತಾ ಮತ್ತು ರಕ್ಷಣಾ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಪ್ರತಿಪಾದಿಸುತ್ತಿದ್ದು ಚೀನಾದ ಯುದ್ಧವಿಮಾನಗಳ ಪರ ಪ್ರಚಾರ ಮಾಡುತ್ತಿದ್ದಾರೆ. ರಫೇಲ್ ವಿಮಾನಗಳ ಖರೀದಿಗೆ ಈಗಾಗಲೇ `ಆರ್ಡರ್' ಸಲ್ಲಿಸಿರುವ ದೇಶ ಹಾಗೂ ಸಂಭಾವ್ಯ ಖರೀದಿಗಾರರ ಮೇಲೆ ಚೀನಾ ಕಣ್ಣಿಟ್ಟಿದೆ ಎಂದು ವರದಿ ಹೇಳಿದೆ. ಇಂಡೊ-ಪೆಸಿಫಿಕ್ ವಲಯದಲ್ಲಿ ಪಾಶ್ಚಿಮಾತ್ಯ ದೇಶಗಳ ಪ್ರಭಾವವನ್ನು ಸೀಮಿತಗೊಳಿಸುವ ಉದ್ದೇಶವನ್ನು ಚೀನಾ ಹೊಂದಿರಬಹುದು ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.
ಭಾರತದೊಂದಿಗಿನ ಮಿಲಿಟರಿ ಸಂಘರ್ಷದ ಸಂದರ್ಭ 3 ರಫೇಲ್ ಯುದ್ಧವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಪ್ರತಿಪಾದಿಸಿದ ಕೆಲ ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಆದರೆ ಪಾಕಿಸ್ತಾನದ ಪ್ರತಿಪಾದನೆ ತಪ್ಪುಗ್ರಹಿಕೆ ಎಂದು ರಫೇಲ್ ಯುದ್ಧವಿಮಾನಗಳನ್ನು ತಯಾರಿಸುವ ದಸ್ಸಾಲ್ಟ್ ಏವಿಯೇಷನ್ ಸಂಸ್ಥೆಯ ಸಿಇಒ ಎರಿಕ್ ಟ್ರಾಪಿಯರ್ ಹೇಳಿದ್ದಾರೆ.