×
Ad

ಒತ್ತೆಯಾಳು ಒಪ್ಪಂದಕ್ಕೆ ಆಗ್ರಹಿಸಿ ಇಸ್ರೇಲ್‍ ನಾದ್ಯಂತ ರ‍್ಯಾಲಿ

ಜೀವಗಳನ್ನು ಉಳಿಸಲು ಕೊನೆಯ ಅವಕಾಶ ಬಳಸಿಕೊಳ್ಳಲು ಆಗ್ರಹ

Update: 2025-08-24 22:17 IST

PC :  X 

ಜೆರುಸಲೇಂ, ಆ.24: ಗಾಝಾ ಪಟ್ಟಿಯಲ್ಲಿ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಂದ ಮಾಡಿಕೊಳ್ಳುವಂತೆ ಸರಕಾರವನ್ನು ಆಗ್ರಹಿಸಿ ಇಸ್ರೇಲ್‍ನಾದ್ಯಂತ ಶನಿವಾರ ತಡರಾತ್ರಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು `ಜೀವಗಳನ್ನು ಉಳಿಸಲು ಕೊನೆಯ ಅವಕಾಶವನ್ನು ಬಳಸಿಕೊಳ್ಳುವಂತೆ' ಸರಕಾರವನ್ನು ಆಗ್ರಹಿಸಿದ್ದಾರೆ.

ಗಾಝಾದಲ್ಲಿ ಉಳಿದಿರುವ ಒತ್ತೆಯಾಳುಗಳ ಬಿಡುಗಡೆ ಕುರಿತ ಮಾತುಕತೆಯ ಜೊತೆಗೇ ಗಾಝಾ ನಗರವನ್ನು ವಶಪಡಿಸಿಕೊಳ್ಳುವ ಉದ್ದೇಶದ ಮಿಲಿಟರಿ ಕಾರ್ಯಾಚರಣೆ ನಡೆಯಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ನೀಡಿರುವ ಹೇಳಿಕೆಯನ್ನು ಪ್ರತಿಭಟನಾಕಾರರು ಖಂಡಿಸಿದರು.

ಟೆಲ್‍ ಅವೀವ್ ಸೇರಿದಂತೆ ಪ್ರಮುಖ ನಗರಗಳ ರಸ್ತೆಗಳಲ್ಲಿ ಬೃಹತ್ ಪ್ರತಿಭಟನೆ ಮತ್ತು ರ‍್ಯಾಲಿ ನಡೆಸಲಾಗಿದೆ. `ಒಪ್ಪಂದ ಏರ್ಪಟ್ಟಿತ್ತು. ಆದರೆ ಅದು ಅಲ್ಪಾವಧಿಯಲ್ಲೇ ಕುಸಿದು ಬಿತ್ತು. ಸರಕಾರ ಕ್ಷಿಪ್ರವಾಗಿ ಕಿಟಕಿ ಬಾಗಿಲುಗಳನ್ನು ಮುಚ್ಚಿಬಿಟ್ಟಿತು. ಜೀವಗಳನ್ನು ಉಳಿಸಲು ಮತ್ತು ಒತ್ತೆಯಾಳುಗಳನ್ನು ಕರೆತರಲು ಇದು ಬಹುಷಃ ಅಂತಿಮ ಅವಕಾಶವಾಗಿರಬಹುದು' ಎಂದು ಪ್ರತಿಭಟನಾಕಾರರು ಸರಕಾರವನ್ನು ಆಗ್ರಹಿಸಿದರು.

ಪ್ರಧಾನಿ ನೆತನ್ಯಾಹು ಕದನ ವಿರಾಮ ಒಪ್ಪಂದವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅವರು ಮಾತುಕತೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಪ್ರಾಯೋಗಿಕವಾಗಿ ಅವರು ಒತ್ತೆಯಾಳುಗಳನ್ನು ಬಲಿಪಶುಗಳನ್ನಾಗಿಸುತ್ತಿದ್ದಾರೆ ಎಂದು ಪ್ರತಿಭಟನಾ

ರ‍್ಯಾಲಿಯ ಸಂದರ್ಭ ಆಕ್ರೋಶ ವ್ಯಕ್ತಪಡಿಸಲಾಗಿದೆ ಎಂದು `ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ.

► ನೆತನ್ಯಾಹು ತನ್ನ ಮಗನನ್ನು ಗಾಝಾಕ್ಕೆ ಕಳುಹಿಸಲಿ: ಒತ್ತೆಯಾಳುಗಳ ಕುಟುಂಬದ ಆಕ್ರೋಶ !

ಗಾಝಾದಲ್ಲಿ ಉಳಿದಿರುವ ಒತ್ತೆಯಾಳುಗಳ ಬಿಡುಗಡೆಗೆ ಗಾಝಾ ನಗರವನ್ನು ವಶಪಡಿಸಿಕೊಳ್ಳುವುದೊಂದೇ ಮಾರ್ಗ ಎಂದು ಪ್ರಧಾನಿ ನೆತನ್ಯಾಹು ದೃಢವಿಶ್ವಾಸ ಹೊಂದಿದ್ದರೆ ಅವರು ತನ್ನ ಇಬ್ಬರು ಪುತ್ರರನ್ನು ಹೋರಾಟಕ್ಕೆ ಕಳುಹಿಸಲಿ ಎಂದು ಒತ್ತೆಯಾಳುಗಳ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವೇಳೆ ಗಾಝಾ ನಗರದಲ್ಲಿ ಉದ್ದೇಶಿತ ಮಿಲಿಟರಿ ಕಾರ್ಯಾಚರಣೆ ಮುಂದುವರಿದರೆ ಅದರ ಫಲಿತಾಂಶದ ಹೊಣೆಯನ್ನು ನೆತನ್ಯಾಹು ವಹಿಸಿಕೊಳ್ಳಬೇಕು ಎಂದು ಟೆಲ್‍ಅವೀವ್‍ನ ಬೆಗಿನ್ ರಸ್ತೆಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಆಕ್ರೋಶ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News