×
Ad

ರೇರ್ ಅರ್ಥ್ ಖನಿಜ ರಫ್ತಿಗೆ ಚೀನಾ ನಿರ್ಬಂಧ : ಭಾರತದ ನೆರವು ಕೋರಿದ ಅಮೆರಿಕ

Update: 2025-10-15 07:47 IST

PC | timesofindia

ವಾಷಿಂಗ್ಟನ್ : ರೇರ್ ಅರ್ಥ್ ಖನಿಜ ರಫ್ತಿಗೆ ಚೀನಾ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಚೀನಾ ಅಧ್ಯಕ್ಷ ಕ್ಸಿ ಜಿಂಗ್‍ಪಿಂಗ್ ಅವರ ಆರ್ಥಿಕ ನಡೆಯನ್ನು 'ಪ್ರಚೋದನಕಾರಿ' ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬಣ್ಣಿಸಿದ್ದಾರೆ. ಇದರೊಂದಿಗೆ ಎರಡು ದೈತ್ಯಶಕ್ತಿಗಳ ನಡುವಿನ ವ್ಯಾಪಾರ ಸಮರ ಮತ್ತಷ್ಟು ತೀಕ್ಷ್ಣವಾಗಿದೆ.

ಫೋಕ್ಸ್ ಬ್ಯುಸಿನೆಸ್ ಜತೆ ಸೋಮವಾರ ಮಾತನಾಡಿದ ಅವರು, ಈ ನಡೆ ಜಾಗತಿಕ ಆರ್ಥಿಕತೆಗೆ ನೇರ ಸವಾಲು ಎಂದು ವಿಶ್ಲೇಷಿಸಿದರು. "ಇದು ಚೀನಾ ಹಾಗೂ ವಿಶ್ವದ ಇತರ ದೇಶಗಳ ನಡುವಿನ ಸಮರ. ಅವರು ಘೋಷಿಸಿದ ರಫ್ತಿನ ನಿರ್ಬಂಧ ಮುಂದಿನ ತಿಂಗಳಿನಿಂದ ಜಾತಿಗೆ ಬರಲಿದ್ದು, ನಾವು ಅವರನ್ನು ಆಕ್ರಮಣಕಾರಿಯಾಗಿ ಹಿಂದಕ್ಕೆ ತಳ್ಳಿದ್ದೇವೆ. ಇದು ಎಲ್ಲಿಂದ ಬಂದಿದೆ ಹಾಗೂ ಚೀನಾ ಈಗ ಏಕೆ ಹೀಗೆ ಮಾಡಿದೆ ಎನ್ನುವುದು ತಿಳಿಯದು" ಎಂದು ಅಭಿಪ್ರಾಯಪಟ್ಟರು.

ಭಾರತ, ಯೂರೋಪ್ ಮತ್ತು ಇತರ ಏಷ್ಯನ್ ಪ್ರಜಾಸತ್ತಾತ್ಮಕ ದೇಶಗಳೊಂದಿಗೆ ಈ ವಿಚಾರದಲ್ಲಿ ಸಮನ್ವಯ ಸಾಧಿಸಲು ಅಮೆರಿಕ ಮುಂದಾಗಿದೆ ಎಂದು ಸ್ಪಷ್ಟಪಡಿಸಿದರು. ಚೀನಾದ ನಡೆಗೆ ಸಂಘಟಿತವಾಗಿ ಸ್ಪಂದಿಸಬೇಕು ಎಂದು ಕರೆ ನೀಡಿದರು. ಈ ಎಲ್ಲ ದೇಶಗಳಿಂದ ಅಮೆರಿಕಕ್ಕೆ ನೆರವು ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಕ್ಷಣೆ, ವಿದ್ಯುತ್ ವಾಹನ, ಎಲೆಕ್ಟ್ರಾನಿಕ್ಸ್ ನಂಥ ಕ್ಷೇತ್ರಗಳಿಗೆ ಪ್ರಮುಖ ವಸ್ತುಗಳಾದ ರೇರ್ ಅಥ್ರ್ಸ್ ವಲಯದಲ್ಲಿ ಹೊಂದಿದ ಪ್ರಾಬಲ್ಯವನ್ನು ಅಸ್ತ್ರವನ್ನಾಗಿ ಚೀನಾ ಬಳಸಲು ಅಮೆರಿಕ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

"ಇಡೀ ಪೂರೈಕೆ ಸರಣಿಗೆ ಧಕ್ಕೆ ತರುವ ಮತ್ತು ಇಡೀ ಮುಕ್ತ ವಿಶ್ವದ ಕೈಗಾರಿಕಾ ನೆಲೆಯನ್ನೇ ನಾಶಮಾಡಲು ಅವರು ಹೊರಟಿದ್ದಾರೆ. ಅದು ಆಗಲು ನಾವು ಅವಕಾಶ ನೀಡುವುದಿಲ್ಲ. ಚೀನಾ ಆರ್ಥಿಕತೆಯನ್ನು ನಿಯಂತ್ರಿಸಲು ಹೊರಟಿದೆ. ಆದರೆ ನಮ್ಮ ಮೇಲೆ ಅಧಿಕಾರ ಚಲಾಯಿಸಲು ಅಥವಾ ನಮ್ಮನ್ನು ನಿಯಂತ್ರಿಸಲು ಸಾಧ್ಯವಿಲ್ಲ" ಎಂದು ಗುಡುಗಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News