ರೊನಾಲ್ಡ್ ರೇಗನ್ ಜಾಹೀರಾತು ವಿವಾದ : ಕೆನಡಾದೊಂದಿಗೆ ವ್ಯಾಪಾರ ಮಾತುಕತೆ ರದ್ದು ; ಟ್ರಂಪ್ ಘೋಷಣೆ
Photo credit:timesofindia
ವಾಷಿಂಗ್ಟನ್, ಅ.24: ಕೆನಡಾವು ಅಮೆರಿಕಾದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಸುಂಕ ಉಪಕ್ರಮಗಳನ್ನು ಟೀಕಿಸುವ ನಕಲಿ ಜಾಹೀರಾತನ್ನು ಬಳಸುತ್ತಿದೆ ಎಂದು ಆರೋಪಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾದೊಂದಿಗಿನ ಎಲ್ಲಾ ವ್ಯಾಪಾರ ಮಾತುಕತೆಗಳನ್ನೂ ರದ್ದುಗೊಳಿಸುವುದಾಗಿ ಘೋಷಿಸಿದ್ದಾರೆ.
ರೇಗನ್ ಸುಂಕಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿರುವ ನಕಲಿ ಜಾಹೀರಾತನ್ನು ಕೆನಡಾ ಮೋಸದಿಂದ ಬಳಸಿದೆ ಎಂದು ರೊನಾಲ್ಡ್ ರೇಗನ್ ಪ್ರತಿಷ್ಠಾನ ಘೋಷಿಸಿದೆ. ಕೆನಡಾ ಮೋಸ ಮಾಡಿ ಸಿಕ್ಕಿಬಿದ್ದಿದೆ. ರೇಗನ್‍ಗೆ ಸುಂಕ ಇಷ್ಟವಾಗಿಲ್ಲ ಎಂಬ ಸುಳ್ಳು ಜಾಹೀರಾತನ್ನು ಅವರು ಪ್ರಸಾರ ಮಾಡಿದ್ದಾರೆ. ಆದರೆ ವಾಸ್ತವದಲ್ಲಿ ರೇಗನ್ ದೇಶಕ್ಕಾಗಿ ಕೈಗೊಂಡಿರುವ ಸುಂಕದ ಕ್ರಮಗಳನ್ನು ಇಷ್ಟಪಟ್ಟಿದ್ದಾರೆ. ಸುಂಕದ ಬಗ್ಗೆ ಅಮೆರಿಕಾದ ಸುಪ್ರೀಂಕೋರ್ಟ್‍ನಲ್ಲಿ ನಡೆಯುತ್ತಿರುವ ವಿಚಾರಣೆಯ ಮೇಲೆ ಪ್ರಭಾವ ಬೀರಲು ಕೆನಡಾ ಉದ್ದೇಶಿಸಿದೆ. ಸುಂಕದಿಂದ ಅಮೆರಿಕಾ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಕೆನಡಾದ ಒಂಟಾರಿಯೊ ಪ್ರಾಂತದ ಪ್ರೀಮಿಯರ್ ಡಗ್ ಫೋರ್ಡ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಜಾಹೀರಾತಿನಲ್ಲಿ ರೇಗನ್ `ವಿದೇಶದ ಆಮದುಗಳ ಮೇಲೆ ಸುಂಕ ವಿಧಿಸುವುದಾಗಿ ಕೆಲವರು ಹೇಳುತ್ತಿರುವುದು ಅಮೆರಿಕನ್ ಉತ್ಪನ್ನಗಳು ಮತ್ತು ಉದ್ಯೋಗಗಳನ್ನು ರಕ್ಷಿಸುವ ಮೂಲಕ ದೇಶಭಕ್ತಿಯ ಕೆಲಸವೆಂದು ತೋರಬಹುದು. ಅಲ್ಪಾವಧಿಗೆ ಇದು ಕೆಲಸ ಮಾಡಬಹುದು. ಆದರೆ ದೀರ್ಘಾವಧಿಯಲ್ಲಿ ಇಂತಹ ವ್ಯಾಪಾರ ತಡೆಗಳು ಪ್ರತಿಯೊಬ್ಬ ಅಮೆರಿಕನ್ ಕೆಲಸಗಾರ ಮತ್ತು ಗ್ರಾಹಕರಿಗೆ ಹಾನಿ ಉಂಟು ಮಾಡುತ್ತದೆ' ಎಂದು ಹೇಳುವಂತೆ ತೋರಿಸಲಾಗಿದೆ. ಈ ಜಾಹೀರಾತನ್ನು ಅಮೆರಿಕನ್ ಲೀಗ್ ಟೂರ್ನಿಯಲ್ಲಿ ಟೊರಂಟೋ ಬ್ಲೂ ಜೇಸ್ ಮತ್ತು ಸಿಯಾಟಲ್ ಮರೈನರ್ಸ್ ನಡುವಿನ ಪಂದ್ಯದಲ್ಲೂ ಪ್ರಸಾರ ಮಾಡಿದ್ದು ಈ ಪಂದ್ಯವನ್ನು 9 ದಶಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು. ಜಾಹೀರಾತಿನ ವಿರುದ್ಧ ಕಾನೂನು ಕ್ರಮದ ಕುರಿತು ಪರಿಶೀಲಿಸುತ್ತಿರುವುದಾಗಿ ರೇಗನ್ ಪ್ರತಿಷ್ಠಾನದ ಮೂಲಗಳು ಹೇಳಿವೆ.