ಉಕ್ರೇನ್ ನ ತೈಲ ಸಂಸ್ಕರಣಾಗಾರದ ಮೇಲೆ ರಶ್ಯದ ದಾಳಿ
Photo: x
ಮಾಸ್ಕೋ: ಉಕ್ರೇನ್ ನ ಡೊನ್ಬಾಸ್ ವಲಯದಲ್ಲಿರುವ ಕ್ರೆಮೆಂಚುಕ್ ತೈಲ ಸಂಸ್ಕರಣಾಗಾರದ ಮೇಲೆ ರವಿವಾರ ರಶ್ಯದ ಪಡೆಗಳು ದಾಳಿ ನಡೆಸಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.
ಉಕ್ರೇನ್ ಮಿಲಿಟರಿಗೆ ತೈಲ ಸರಬರಾಜು ಮಾಡುತ್ತಿದ್ದ ಸಂಸ್ಕರಣಾಗಾರದ ಮೇಲೆ ಸಮುದ್ರ ಮತ್ತು ವಾಯುಮಾರ್ಗದ ಮೂಲಕ ಕ್ಷಿಪಣಿ ಹಾಗೂ ಡ್ರೋನ್ಗಳನ್ನು ಬಳಸಿ ನಡೆಸಿದ ದಾಳಿ ಯಶಸ್ವಿಯಾಗಿದೆ ಎಂದು ಹೇಳಿಕೆ ತಿಳಿಸಿದೆ.
ಮಧ್ಯ ಪೊಲ್ಟೋವಾ ಪ್ರಾಂತದಲ್ಲಿರುವ ಉಕ್ರೇನ್ ನ ಇಂಧನ ಮೂಲಸೌಕರ್ಯದ ಮೇಲೆ ದಾಳಿ ನಡೆದಿರುವುದನ್ನು ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಖಂಡಿಸಿದ್ದು ದುರದೃಷ್ಟವಶಾತ್ ಇಂಧನ ಮೂಲಸೌಕರ್ಯಕ್ಕೆ ಹಾನಿಯಾಗಿರುವುದನ್ನು ದೃಢಪಡಿಸಿದ್ದಾರೆ. ರಶ್ಯದ ಇಂಧನ ವ್ಯವಸ್ಥೆಯ ಮೇಲೆ ದಾಳಿ ನಡೆಸದಂತೆ ಅಮೆರಿಕ ನಮ್ಮನ್ನು ಕೇಳಿಕೊಂಡಿತ್ತು. ಆದರೆ ಈ ಯುದ್ಧವನ್ನು ಕೊನೆಗೊಳಿಸಲು ಅಂತರಾಷ್ಟ್ರೀಯ ಸಮುದಾಯ ನಡೆಸುತ್ತಿರುವ ಎಲ್ಲಾ ಪ್ರಯತ್ನಗಳನ್ನೂ ಹಾಳುಗೆಡವಲು ರಶ್ಯ ನಿರ್ಧರಿಸಿರುವುದನ್ನು ಈ ದಾಳಿ ಸೂಚಿಸಿದೆ ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಮಧ್ಯೆ, ಉಕ್ರೇನ್ ನ ಡೊನೆಟ್ಸ್ಕ್ ಪ್ರಾಂತದ ಮಲಿನಿವ್ಕ ಗ್ರಾಮವನ್ನು ತನ್ನ ಪಡೆಗಳು ವಶಕ್ಕೆ ಪಡೆದಿದ್ದು ಸುಮಿ ಪ್ರಾಂತದಲ್ಲಿ ಮತ್ತಷ್ಟು ಮುನ್ನಡೆ ಸಾಧಿಸಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.