ರಷ್ಯಾದಲ್ಲಿ ಸಂಭವಿಸಿದ 8.8 ತೀವ್ರತೆಯ ಭೂಕಂಪ 14 ವರ್ಷಗಳಲ್ಲೇ ಅತ್ಯಂತ ಪ್ರಬಲ!
Photo credit: PTI
ಮಾಸ್ಕೋ : ರಷ್ಯಾದ ಕಮ್ಚಟ್ಸ್ಕಾ ಪ್ರದೇಶದಲ್ಲಿ ಬುಧವಾರ ಬೆಳಗಿನ ಜಾವ 8.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಪೂರ್ವ ರಷ್ಯಾದಲ್ಲಿ ತೀವ್ರ ಕಂಪನಕ್ಕೆ ಕಾರಣವಾದ ಈ ಭೂಕಂಪ ನೆರೆಯ ರಾಷ್ಟ್ರಗಳಾದ ಜಪಾನ್, ಅಮೆರಿಕ ಮತ್ತು ಪೆಸಿಫಿಕ್ ದ್ವೀಪಗಳಲ್ಲಿ ಸುನಾಮಿ ಅಲೆಗಳಿಗೆ ಕಾರಣವಾಗಿದೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯು 8.8 ತೀವ್ರತೆಯನ್ನು ದಾಖಲಿಸಿದ್ದು, ರಷ್ಯಾದಲ್ಲಿ ಸಂಭವಿಸಿದ ಈ ಭೂಕಂಪ 14 ವರ್ಷಗಳಲ್ಲಿ ವಿಶ್ವದ ಅತಿ ಪ್ರಬಲ ಭೂಕಂಪವಾಗಿದೆ. ಇದುವರೆಗೆ ಸಂಭವಿಸಿದ ಆರನೇ ಪ್ರಬಲ ಭೂಕಂಪವಾಗಿದೆ.
2011ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪದ ನಂತರ ರಷ್ಯಾದಲ್ಲಿ ಬುಧವಾರ ಸಂಭವಿಸಿದ ಭೂಕಂಪ ವಿಶ್ವದಲ್ಲೇ ಅತ್ಯಂತ ಪ್ರಬಲ ಭೂಕಂಪವಾಗಿದೆ. 2011ರಲ್ಲಿ ಜಪಾನ್‌ನಲ್ಲಿ 9.1 ತೀವ್ರತೆಯ ಮೆಗಾಥ್ರಸ್ಟ್ ಭೂಕಂಪ ಸಂಭವಿಸಿ ದೊಡ್ಡ ಸುನಾಮಿಗೆ ಕಾರಣವಾಗಿತ್ತು.
ಕಮ್ಚಟ್ಸ್ಕಾ ಪ್ರದೇಶದಲ್ಲಿ ದೊಡ್ಡ ಭೂಕಂಪ ಸಂಭವಿಸಿದ್ದು ಇದೇ ಮೊದಲಲ್ಲ. 1952ರಲ್ಲಿ ಸೋವಿಯತ್ ಒಕ್ಕೂಟದ ಯುಗದಲ್ಲಿ ಈ ಪ್ರದೇಶದಲ್ಲಿ 9.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದುವರೆಗೆ ದಾಖಲಾದ ಅತ್ಯಂತ ಪ್ರಬಲ ಭೂಕಂಪ 1960ರಲ್ಲಿ ಚಿಲಿಯಲ್ಲಿ ಸಂಭವಿಸಿದೆ. ಚಿಲಿಯ ವಾಲ್ಡಿವಿಯಾದಲ್ಲಿ 9.4 ರಿಂದ 9.6ರ ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದುವರೆಗೆ ದಾಖಲಾದ ಎರಡನೇ ಪ್ರಬಲ ಭೂಕಂಪ 1964ರಲ್ಲಿ ಅಲಾಸ್ಕಾದಲ್ಲಿ ಸಂಭವಿಸಿದೆ.
2004ರಲ್ಲಿ ಇಂಡೋನೇಷ್ಯಾದ ಸುಮಾತ್ರದಲ್ಲಿ ಸಂಭವಿಸಿದ ಭೂಕಂಪ ವಿಶ್ವದ ಮೂರನೇ ಅತಿದೊಡ್ಡ ಭೂಕಂಪವಾಗಿದೆ. 9.2 ರಿಂದ 9.3 ತೀವ್ರತೆಯ ಈ ಭೂಕಂಪ ಇಂಡೋನೇಷ್ಯಾ, ಭಾರತ, ಮಲೇಷ್ಯಾ, ಮ್ಯಾನ್ಮಾರ್, ಶ್ರೀಲಂಕಾ, ಥೈಲ್ಯಾಂಡ್, ಸೊಮಾಲಿಯಾ ಮತ್ತು ಮಾಲ್ಡೀವ್ಸ್ ಮೇಲೆ ಪರಿಣಾಮ ಬೀರಿತ್ತು. 2011ರಲ್ಲಿ ಜಪಾನ್‌ನಲ್ಲಿ ಸಂಭವಿಸಿದ ಭೂಕಂಪವು ವಿಶ್ವದ ನಾಲ್ಕನೇ ಪ್ರಬಲ ಭೂಕಂಪವಾಗಿದೆ.