ಉಕ್ರೇನ್ ಮೇಲೆ ಕ್ಷಿಪಣಿ ಮಳೆಗರೆದ ರಶ್ಯ: 23 ಮಂದಿಗೆ ಗಾಯ; ವ್ಯಾಪಕ ನಾಶ-ನಷ್ಟ
ಸಾಂದರ್ಭಿಕ ಚಿತ್ರ
ಕೀವ್: ಗುರುವಾರ ರಾತ್ರಿಯಿಂದ ಉಕ್ರೇನ್ ರಾಜಧಾನಿ ಕೀವ್ ನಗರ ಸೇರಿದಂತೆ ದೇಶದಾದ್ಯಂತ ರಶ್ಯ ಡ್ರೋನ್ ಮತ್ತು ಕ್ಷಿಪಣಿಗಳ ಮಳೆಗರೆದಿದ್ದು ಕನಿಷ್ಠ 23 ಮಂದಿ ಗಾಯಗೊಂಡಿದ್ದಾರೆ. ಹಲವು ಕಟ್ಟಡಗಳು, ವಾಹನಗಳು ಬೆಂಕಿಗೆ ಆಹುತಿಯಾಗಿದೆ ಎಂದು ವರದಿಯಾಗಿದೆ.
ಉಕ್ರೇನ್ ವಿರುದ್ಧದ ಯುದ್ಧ ಆರಂಭಗೊಂಡ ಬಳಿಕ ರಶ್ಯ ನಡೆಸಿದ ಅತ್ಯಂತ ಬೃಹತ್ ದಾಳಿ ಇದಾಗಿದ್ದು ಕನಿಷ್ಠ 550 ಡ್ರೋನ್‍ಗಳು ಹಾಗೂ 11 ಕ್ಷಿಪಣಿಗಳನ್ನು ರಶ್ಯ ಪ್ರಯೋಗಿಸಿದೆ. ಇದರಲ್ಲಿ 270 ಡ್ರೋನ್ ಗಳನ್ನು ಹಾಗೂ ಎರಡು ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ವಾಯುಪಡೆ ಹೇಳಿದೆ. ರಾಜಧಾನಿ ಕೀವ್ ದಾಳಿಯ ಪ್ರಾಥಮಿಕ ಗುರಿಯಾಗಿದ್ದು 5 ಜಿಲ್ಲೆಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ.
ಸೊಲೊಮಿಯಾಂಸ್ಕಿ ಜಿಲ್ಲೆಯಲ್ಲಿ ಐದು ಅಂತಸ್ತಿನ ಕಟ್ಟಡ ಭಾಗಶಃ ಕುಸಿದು ಬಿದ್ದಿದ್ದು 7 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಹಾರ ಗೋದಾಮು, ಕೆಲವು ಅಂಗಡಿಗಳಿಗೂ ಹಾನಿಯಾಗಿದೆ. ಸ್ವಿಟೊಶಿಂಸ್ಕಿ ಜಿಲ್ಲೆಯಲ್ಲಿ 14 ಅಂತಸ್ತಿನ ಕಟ್ಟಡಕ್ಕೆ ಹಾನಿಯಾಗಿದ್ದು ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿದೆ ಎಂದು ಕೀವ್ ನಗರದ ಮೇಯರ್ ವಿಟಾಲಿ ಕ್ಲಿಷ್ಕೊ ಹೇಳಿದ್ದಾರೆ. ಡ್ರೋನ್ ದಾಳಿಯಿಂದ ಕೀವ್ ನಗರದಲ್ಲಿನ ರೈಲ್ವೇ ಮೂಲಸೌಕರ್ಯಕ್ಕೆ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.