ಭಾರತ ಎಂಬ ತೈಲ ಗ್ರಾಹಕನನ್ನು ರಷ್ಯಾ ಕಳೆದುಕೊಂಡಿದೆ; ಪುಟಿನ್ ಜತೆಗಿನ ಸಭೆಗೆ ಮುನ್ನ ಟ್ರಂಪ್ ಹೇಳಿಕೆ
ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಅಲಸ್ಕಾದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ರಿಪಬ್ಲಿಕನ್ನರು ಈ ಭೇಟಿಯನ್ನು "ಪ್ರಯೋಜನಕಾರಿ" ಎಂದು ಬಣ್ಣಿಸಿದ್ದಾರೆ. ಆದರೆ ಉಕ್ರೇನ್ ಸಂಘರ್ಷದ ವಿಚಾರದಲ್ಲಿ ಉಭಯ ನಾಯಕರು ಯಾವುದೇ ಒಪ್ಪಂದಕ್ಕೆ ಬಂದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷರು ಸಂಘರ್ಷವನ್ನು ಅರ್ಥ ಮಾಡಿಕೊಂಡಿದ್ದಾಗಿ ಪುಟಿನ್ ಹೇಳಿಕೆ ನೀಡಿದ್ದಾರೆ.
ಅಲಸ್ಕಾಗೆ ತೆರಳುವ ಮುನ್ನ ಫೋಕ್ಸ್ ನ್ಯೂಸ್ ಜತೆ ಮಾತನಾಡಿದ ಟ್ರಂಪ್, ಭೇಟಿಯ ನಿರೀಕ್ಷಿತ ಫಲಗಳ ಬಗ್ಗೆ ಕೇಳಿದಾಗ, ಪ್ರಮುಖ ತೈಲ ಗ್ರಾಹಕ ಎನಿಸಿದ ಭಾರತವನ್ನು ಕಳೆದುಕೊಂಡಿದ್ದರಿಂದ ರಷ್ಯಾ ಅಧ್ಯಕ್ಷರು ಮಾತುಕತೆಗೆ ಮುಂದಾಗಿದ್ದಾರೆ ಎಂದು ಹೇಳಿದರು.
"ಅವರು ಪ್ರಮುಖ ತೈಲ ಗ್ರಾಹಕರನ್ನು ಕಳೆದುಕೊಂಡಿದ್ದಾರೆ; ಭಾರತ ಶೇಕಡ 40ರಷ್ಟು ತೈಲವನ್ನು ಖರೀದಿಸುತ್ತಿತ್ತು. ಚೀನಾ ಕೂಡಾ ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಿದೆ. ನಾನು ಪೂರಕ ನಿರ್ಬಂಧಗಳನ್ನು ಹೇರಿದರೆ, ಅವರ ನಿಲುವಿಗೆ ಅದು ವಿನಾಶಕಾರಿಯಾಗಲಿದೆ. ಅದನ್ನು ಮಾಡಲೇಬೇಕಾದರೆ ನಾನು ಮಾಡುತ್ತೇನೆ. ಬಹುಶಃ ನಾನು ಅದನ್ನು ಮಾಡುವ ಪರಿಸ್ಥಿತಿ ನಿರ್ಮಾಣವಾಗದು" ಎಂದು ಟ್ರಂಪ್ ಹೇಳಿದರು.
ರಷ್ಯಾ ಜತೆಗಿನ ತೈಲ ವ್ಯವಹಾರವನ್ನು ಮುಂದುವರಿಸಿದರೆ ಭಾರತದ ಮೇಲೆ ಶೇಕಡ 50ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ ಕೆಲ ದಿನಗಳ ಬಳಿಕ ಈ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.
ಟ್ರಂಪ್ ಭಾರತದ ವಿರುದ್ಧ ಹೇರಿರುವ ಸುಂಕದ ಅರ್ಧಭಾಗ ಈಗಾಗಲೇ ಜಾರಿಗೆ ಬಂದಿದ್ದು, ಉಳಿದರ್ಧ ಭಾಗ ಆಗಸ್ಟ್ 27ರಿಂದ ಜಾರಿಯಾಗಲಿದೆ.