×
Ad

ಇಸ್ರೇಲ್- ಇರಾನ್ ಸಂಘರ್ಷ ಶಮನಕ್ಕೆ ರಷ್ಯಾ, ಯುಎಇ ಕರೆ

Update: 2025-06-19 08:01 IST

  ಯುಎಇ ಅಧ್ಯಕ್ಷ ಮುಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಜೊತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

PC:x.com/SMO_VZ

ಮಾಸ್ಕೊ: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷವನ್ನು ತಕ್ಷಣ ಶಮನಗೊಳಿಸುವಂತೆ ರಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಬುಧವಾರ ಕರೆ ನೀಡಿವೆ. ಇರಾನ್ ನ ಅಣ್ವಸ್ತ್ರ ವಿವಾದವನ್ನು ಬಗೆಹರಿಸಲು ರಾಜಕೀಯ ಮತ್ತು ರಾಜತಾಂತ್ರಿಕ ಪ್ರಯತ್ನಗಳನ್ನು ತೀವ್ರಗೊಳಿಸುವಂತೆಯೂ ಉಭಯ ದೇಶಗಳು ಸಲಹೆ ನೀಡಿವೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಈ ವಿಚಾರವನ್ನು ಯುಎಇ ಅಧ್ಯಕ್ಷ ಮುಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಜತೆಗೆ ದೂರವಾಣಿ ಮೂಲಕ ಚರ್ಚಿಸಿದ್ದಾಗಿ ಕ್ರೆಮ್ಲಿನ್ ಪ್ರಕಟಿಸಿದೆ.

"ಇಸ್ರೇಲ್ ಮತ್ತು ಇರಾನ್ ನಡುವಿನ ಪರಸ್ಪರ ವೈಷಮ್ಯವನ್ನು ತಕ್ಷಣವೇ ಕೊನೆಗೊಳಿಸುವುದು ಮತ್ತು ಇರಾನ್ ನ ಅಣ್ವಸ್ತ್ರ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಅಂಶಗಳನ್ನು ಬಗೆಹರಿಸುವ ವಿಷಯದಲ್ಲಿ ರಾಜಕೀಯ ಮತ್ತು ರಾಜತಾಂತ್ರಿಕ ಇಚ್ಛಾಶಕ್ತಿಯನ್ನು ತೀವ್ರಗೊಳಿಸುವುದು ಅಗತ್ಯ" ಎಂದು ಉಭಯ ಮುಖಂಡರ ಮಾತುಕತೆಯ ಬಳಿಕ ಕ್ರೆಮ್ಲಿನ್ ಹೇಳಿದೆ.

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಧಾನ ಮಾತುಕತೆಯ ಮಧ್ಯಸ್ಥಿಕೆ ವಹಿಸಲು ತಾವು ಸಿದ್ಧ ಎಂದು ರಷ್ಯಾ ಅಧ್ಯಕ್ಷರು ಈ ಮಾತುಕತೆ ವೇಳೆ ಭರವಸೆ ನೀಡಿದರು ಹಾಗೂ ಈ ಬಗ್ಗೆ ಹಲವಾರು ಮಂದಿ ವಿದೇಶಿ ಮುಖಂಡರ ಜತೆಗೆ ಸಂಪರ್ಕದಲ್ಲಿರುವುದಾಗಿ ಸ್ಪಷ್ಟಪಡಿಸಿದರು.

ಇದರ ಮಧ್ಯೆ ಉಭಯ ದೇಶಗಳ ನಡುವೆ ದಾಳಿ-ಪ್ರತಿದಾಳಿ ಸತತ ಆರನೇ ದಿನವೂ ಮುಂದುವರಿದಿದ್ದು, ಪಶ್ಚಿಮ ಏಷ್ಯಾದಲ್ಲಿ ಅಣ್ವಸ್ತ್ರದ ಬೆದರಿಕೆ ಕಾಲ್ಪನಿಕವಾಗಿ ಉಳಿದಿಲ್ಲ; ಇದು ನೈಜ ಸಮಸ್ಯೆ ಎಂದು ರಷ್ಯಾ ಎಚ್ಚರಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಬಗ್ಗೆ ಹೇಳಿಕೆ ನೀಡಿ ಇರಾನ್ ನ ಅಣ್ವಸ್ತ್ರ ಕನಸನ್ನು ನುಚ್ಚುನೂರುಗೊಳಿಸುವುದು ಮತ್ತು ಕ್ಷಿಪಣಿ ಉತ್ಪಾದನೆ ಹಾಗೂ ದಾಳಿ ಸಾಮರ್ಥ್ಯವನ್ನು ತಟಸ್ಥಗೊಳಿಸುವುದು ದಾಳಿಯ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News