ಉಕ್ರೇನ್ ಇಂಧನ ಸ್ಥಾವರದ ಮೇಲೆ ರಶ್ಯದ ದಾಳಿ: ಇಬ್ಬರು ಮೃತ್ಯು
ಸಾಂದರ್ಭಿಕ ಚಿತ್ರ | Photo : PTI
ಕೀವ್: ದಕ್ಷಿಣ ಉಕ್ರೇನ್‍ನ ಒಡೆಸಾ ಪ್ರಾಂತದಲ್ಲಿ ಇಂಧನ ವ್ಯವಸ್ಥೆಗಳ ಮೇಲೆ ರಶ್ಯ ನಡೆಸಿದ ದಾಳಿಯ ಬಳಿಕ ಕಪ್ಪು ಸಮುದ್ರ ಪ್ರದೇಶದಲ್ಲಿ ವಿದ್ಯುಚ್ಛಕ್ತಿ ಸಂಪರ್ಕ ಕಡಿತಗೊಂಡಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ನಿರ್ಣಾಯಕ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದ್ದು ಒಡೆಸಾ ನಗರದ ಹಲವು ಭಾಗಗಳಿಗೆ ವಿದ್ಯುತ್, ನೀರು ಪೂರೈಕೆ ಕಡಿತಗೊಂಡಿದೆ. ದಾಳಿಯ ಬಳಿಕ ಹೊತ್ತಿಕೊಂಡಿರುವ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಪಡೆ ಕಾರ್ಯಾಚರಣೆ ತೀವ್ರಗೊಳಿಸಿದೆ. ಒಡೆಸಾ ನಗರದ ಹೊರವಲಯದಲ್ಲಿ ಕ್ಷಿಪಣಿಗಳ ಚೂರುಗಳು ಬಡಿದು 77 ವರ್ಷದ ವ್ಯಕ್ತಿ, ಖೆರ್ಸಾನ್ ಪ್ರದೇಶದಲ್ಲಿ 55 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಮಾಹಿತಿ ನೀಡಿದ್ದಾರೆ.
ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗಿನವರೆಗೆ ರಶ್ಯವು 4 ಕ್ಷಿಪಣಿಗಳು ಮತ್ತು 181 ಡ್ರೋನ್‍ಗಳನ್ನು ಪ್ರಯೋಗಿಸಿದ್ದು ಇದರಲ್ಲಿ 115 ಡ್ರೋನ್‍ಗಳನ್ನು ವಾಯುಪ್ರದೇಶ ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಉಕ್ರೇನ್ ವಾಯುಪಡೆ ಹೇಳಿದೆ.