ಉಕ್ರೇನ್ ಮೇಲೆ ರಶ್ಯದಿಂದ ವೈಮಾನಿಕ ದಾಳಿ : ಮೂವರು ಮೃತ್ಯು
PC : @andrii_sybiha
ಕೀವ್, ಸೆ.20: ಉಕ್ರೇನ್‍ನಾದ್ಯಂತ ಕೆಲ ಪ್ರದೇಶಗಳನ್ನು ಗುರಿಯಾಗಿಸಿ ಶನಿವಾರ ಬೆಳಿಗ್ಗೆ ರಶ್ಯ ನಡೆಸಿದ ದೊಡ್ಡ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ರಶ್ಯವು 619 ಡ್ರೋನ್‍ಗಳು, 8 ಬ್ಯಾಲಿಸ್ಟಿಕ್, 32 ಕ್ರೂಸ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು 552 ಡ್ರೋನ್‍ಗಳು, 2 ಬ್ಯಾಲಿಸ್ಟಿಕ್ ಹಾಗೂ 29 ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ. ನಿಪ್ರೊಪೆಟ್ರೋವ್ಸ್ಕ್ ಪ್ರಾಂತದಲ್ಲಿ ಕನಿಷ್ಠ 26 ಮಂದಿ ಗಾಯಗೊಂಡಿದ್ದು ಹಲವು ಬಹುಮಹಡಿ ಕಟ್ಟಡಗಳು ಹಾಗೂ ಮನೆಗಳು ಹಾನಿಗೊಂಡಿವೆ. ಕೀವ್ ಪ್ರಾಂತದಲ್ಲಿ ಮನೆಗಳು ಹಾಗೂ ವಾಹನಗಳಿಗೆ ಹಾನಿಯಾಗಿದೆ.
ನಿಪ್ರೊಪೆಟ್ರೋವ್ಸ್ಕ್, ಮಿಕೊಲಾಯಿವ್, ಚೆರ್ನಿಹಿವ್, ಝಪೋರಿಝಿಯಾ, ಪೋಲ್ಟಾವ, ಕೀವ್, ಒಡೆಸಾ, ಸುಮಿ ಮತ್ತು ಖಾರ್ಕಿವ್ ಸೇರಿದಂತೆ 9 ಪ್ರಾಂತಗಳಾದ್ಯಂತ ದಾಳಿ ನಡೆದಿದೆ. ನಮ್ಮ ಮೂಲಸೌಕರ್ಯಗಳು, ಜನವಸತಿ ಪ್ರದೇಶಗಳು ಮತ್ತು ನಾಗರಿಕ ಸಂಸ್ಥೆಗಳು ಶತ್ರುಗಳ ಗುರಿಯಾಗಿವೆ. ನಿಪ್ರೋ ನಗರದಲ್ಲಿ ಕ್ಲಸ್ಟರ್ ಶಸ್ತ್ರಾಸ್ತ್ರ ಹೊಂದಿದ್ದ ಕ್ಷಿಪಣಿಯೊಂದು ಬಹುಮಹಡಿ ಕಟ್ಟಡಕ್ಕೆ ಅಪ್ಪಳಿಸಿದೆ. ಇದು ನಮ್ಮ ನಾಗರಿಕರನ್ನು ಬೆದರಿಸಲು ಮತ್ತು ಮೂಲಸೌಕರ್ಯಗಳನ್ನು ನಾಶಗೊಳಿಸಲು ರಶ್ಯ ನಡೆಸಿದ ಉದ್ದೇಶಪೂರ್ವಕ ತಂತ್ರವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಖಂಡಿಸಿದ್ದಾರೆ.