ಉಕ್ರೇನ್: ರಶ್ಯದ ದಾಳಿಯಲ್ಲಿ18 ಸಾವು; 100ಕ್ಕೂ ಅಧಿಕ ಮಂದಿಗೆ ಗಾಯ
Photo Credit: AP
ಕೀವ್, ಜೂ.24: ಉಕ್ರೇನ್ ಮೇಲೆ ರಶ್ಯ ನಡೆಸಿದ ಡ್ರೋನ್, ಕ್ಷಿಪಣಿ ಹಾಗೂ ಫಿರಂಗಿ ದಾಳಿಗಳಲ್ಲಿ ಕನಿಷ್ಠ 18 ನಾಗರಿಕರು ಸಾವನ್ನಪ್ಪಿದ್ದು 100ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಮಧ್ಯ ಉಕ್ರೇನ್‍ನ ನಿಪ್ರೋ ನಗರದ ಮೇಲೆ ಮಂಗಳವಾರ ಮಧ್ಯಾಹ್ನ ರಶ್ಯ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿದ್ದು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಮಾರ್ ನಗರದಲ್ಲಿ ಇಬ್ಬರು ಸಾವನ್ನಪ್ಪಿದ್ದು 11 ಮಂದಿ ಗಾಯಗೊಂಡಿದ್ದಾರೆ. ಕ್ಷಿಪಣಿಗಳ ಸುರಿಮಳೆಯಿಂದ 19 ಶಾಲೆಗಳು, 10 ಶಿಶುವಿಹಾರಗಳು, ಒಂದು ವೃತ್ತಿಪರ ತರಬೇತಿ ಶಾಲೆ, 8 ವೈದ್ಯಕೀಯ ವ್ಯವಸ್ಥೆಗಳು, ಸಮಾಜ ಕಲ್ಯಾಣ ಸಂಸ್ಥೆಯ ಕಚೇರಿಗೆ ಹಾನಿಯಾಗಿದೆ. ಖೆರ್ಸಾನ್ ಪ್ರಾಂತದಲ್ಲಿ ರಶ್ಯದ ಫಿರಂಗಿ ದಾಳಿಯಲ್ಲಿ 4 ಮಂದಿ ಸಾವನ್ನಪ್ಪಿದ್ದು ಕನಿಷ್ಠ 7 ಮಂದಿ ಗಾಯಗೊಂಡಿದ್ದಾರೆ. ಈಶಾನ್ಯ ಉಕ್ರೇನ್‍ನ ಸುಮಿ ಪ್ರಾಂತದಲ್ಲಿ ಡ್ರೋನ್ ದಾಳಿಯಲ್ಲಿ 5 ವರ್ಷದ ಬಾಲಕನ ಸಹಿತ ಮೂವರು ಮೃತಪಟ್ಟಿದ್ದು ಇತರ 6 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.