ಭಯೋತ್ಪಾದನೆಯ ಕೇಂದ್ರ ಬಿಂದು : ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ ವಿದೇಶಾಂಗ ಸಚಿವ ಎಸ್.ಜೈಶಂಕರ್
ಎಸ್.ಜೈಶಂಕರ್ | PC : PTI
ವಾಶಿಂಗ್ಟನ್,ಸೆ.28: ಪಾಕ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಪ್ರಮುಖ ಅಂತಾರಾಷ್ಟೀಯ ಭಯೋತ್ಪಾದಕ ದಾಳಿಗಳ ಮೂಲ ಆ ದೇಶವಾಗಿದೆಯೆಂದು ಹೇಳಿದ್ದಾರೆ. ಇತ್ತೀಚೆಗೆ ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಮಂದಿ ಅಮಾಯಕರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯನ್ನು ಅವರು ಇದಕ್ಕೆ ನಿದರ್ಶನವಾಗಿ ಉಲ್ಲೇಖಿಸಿದರು.
‘‘ಭಯೋತ್ಪಾದನೆಯನ್ನು ಸರಕಾರದ ನೀತಿಯೆಂದು ರಾಷ್ಟ್ರಗಳು ಮುಕ್ತವಾಗಿ ಘೋಷಿಸಿದಲ್ಲಿ, ಭಯೋತ್ಪಾದನಾ ಜಾಲಗಳು ಕೈಗಾರಿಕೆಗಳ ಮಾದರಿಯಲ್ಲಿ ಕಾರ್ಯಾಚರಿಸುತ್ತಿದ್ದಲ್ಲಿ, ಭಯೋತ್ಪಾದಕರನ್ನು ಸಾರ್ವಜನಿಕವಾಗಿ ವೈಭವೀಕರಿಸಿ, ಅಂತಹ ಕೃತ್ಯಗಳನ್ನು ಒಕ್ಕೊರಲಿನಿಂದ ಖಂಡಿಸಬೇಕಾಗಿದೆ’’ ಎಂದರು.
ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರ ಬಿಂದು ಎಂದು ಹೇಳಿದ ಜೈಶಂಕರ್, ದಶಕಳಿಂದ ನಡೆದಿರುವ ಭಯೋತ್ಪಾದಕ ದಾಳಿಗಳಿಗೆ ಆ ದೇಶ ಹೊಣೆಗಾರನಾಗಿದೆ ಎಂದವರು ಆಪಾದಿಸಿದರು.
ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿರುವ ನೆರೆಯ ದೇಶವನ್ನು ಹೊಂದಿರುವ ಭಾರತವು ಸ್ವಾತಂತ್ರ್ಯ ದೊರೆತಾಗಿನಿಂದಲೂ ಭಯೋತ್ಪಾದನೆಯ ಸವಾಲನ್ನು ಎದುರಿಸುತ್ತಲೇ ಬಂದಿದೆ. ಹಲವು ದಶಕಗಳಿಂದ ಪ್ರಮುಖ ಅಂತಾರಾಷ್ಟ್ರೀಯ ಭಯೋತ್ಪಾದಕ ದಾಳಿಗಳಿಗೆ ಒಂದೇ ದೇಶವು ಮೂಲ ಸ್ಥಾನವಾಗಿದೆ. ವಿಶ್ವಸಂಸ್ಥೆಯು ಗುರುತಿಸಿರುವ ಭಯೋತ್ಪಾದಕರ ಪಟ್ಟಿಯಲ್ಲಿ ಆ ದೇಶದ ಪ್ರಜೆಗಳೇ ತುಂಬಿ ತುಳುಕುತ್ತಿದ್ದಾರೆ ಎಂದವರು ವ್ಯಂಗ್ಯವಾಡಿದರು.
ಆಪರೇಶನ್ ಸಿಂಧೂರ್ ಅನ್ನು ಪ್ರಸ್ತಾವಿಸಿದ ಅವರು, ಭಯೋತ್ಪಾದನೆಯ ವಿರುದ್ಧ ತನ್ನ ಜನರನ್ನು ರಕ್ಷಿಸಲು ಭಾರತವು ತನ್ನ ಹಕ್ಕನ್ನು ಚಲಾಯಿಸಿದೆ ಹಾಗೂ ಭಯೋತ್ಪಾದಕ ಕೃತ್ಯದ ರೂವಾರಿಗಳನ್ನು ಹಾಗೂ ಆಯೋಜಕರನ್ನು ಬಗ್ಗು ಬಡಿದಿದೆ ಎಂದರು.
ಪಾಕಿಸ್ತಾನವು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿದ್ದು, ಅದನ್ನು ನಿಲ್ಲಿಸಬೇಕಾಗಿದೆ ಎಂದವರು ಆಗ್ರಹಿಸಿದರು. ಭಯೋತ್ಪಾದನೆಗೆ ಆರ್ಥಿಕ ನೆರವು ದೊರೆಯುವುದನ್ನು ತಡೆಯಬೇಕಾಗಿದೆ ಎಂದು ಜೈಶಂಕರ್ ಆಗ್ರಹಿಸಿದರು.