×
Ad

297 ಜನರಿದ್ದ ಸೌದಿ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ; ತುರ್ತು ಭೂಸ್ಪರ್ಶ

Update: 2024-07-11 16:40 IST

Screengrab:X/@ghulamabbasshah

ಹೊಸದಿಲ್ಲಿ: 297 ಪ್ರಯಾಣಿಕರಿದ್ದ ಸೌದಿ ಏರ್‌ಲೈನ್ಸ್‌ನ ವಿಮಾನ ಗುರುವಾರ ಪಾಕಿಸ್ತಾನದ ಪೇಷಾವರ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಬೆಂಕಿ ಹತ್ತಿಕೊಂಡಿತ್ತು. ಲ್ಯಾಂಡಿಂಗ್ ಗೇರ್‌ನಲ್ಲಿ ಸಮಸ್ಯೆಯಿಂದಾಗಿ ಈ ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಪ್ರಯಾಣಿಕರು ಮತ್ತು ಸಿಬ್ಬಂದಿಗಳನ್ನು ವಿಮಾನದಿಂದ ಸುರಕ್ಷಿತವಾಗಿ ತೆರವುಗೊಳಿಸಲಾಗಿದ್ದು, ಈವರೆಗೆ ಯಾವುದೇ ಸಾವುನೋವು ವರದಿಯಾಗಿಲ್ಲ. ಜೆಟ್ ವಿಮಾನವು ರಿಯಾದ್‌ನಿಂದ ಪೇಷಾವರಕ್ಕೆ ಆಗಮಿಸಿತ್ತು.

ಪೇಷಾವರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಚಕ್ರವೊಂದರಿಂದ ಹೊಗೆ ಬರುತ್ತಿತ್ತು. ವಿಮಾನವನ್ನು ತಕ್ಷಣ ನಿಲ್ಲಿಸಲಾಗಿತ್ತು ಮತ್ತು ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. 276 ಪ್ರಯಾಣಿಕರು ಮತ್ತು 21 ಸಿಬ್ಬಂದಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ. ತಜ್ಞರು ವಿಮಾನದ ತಾಂತ್ರಿಕ ಮೌಲ್ಯಮಾಪನ ನಡೆಸುತ್ತಿದ್ದಾರೆ ಎಂದು ಸೌದಿ ಏರ್‌ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಗ್ಲೋಬಲ್ ಡಿಫೆನ್ಸ್ ಇನ್‌ಸೈಟ್ ವಿಮಾನದ ಸುಟ್ಟು ಕರಕಲಾಗಿರುವ ಭಾಗಗಳ ಚಿತ್ರಗಳನ್ನು ಎಕ್ಸ್ ಪೋಸ್ಟ್‌ನಲ್ಲಿ ಅಪ್‌ಲೋಡ್ ಮಾಡಿದೆ.

ಏರ್ ಟ್ರಾಫಿಕ್ ಕಂಟ್ರೋಲರ್ ತಕ್ಷಣವೇ ಘಟನೆಯ ಬಗ್ಗೆ ಪೈಲಟ್‌ಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಗಳು ಸಕಾಲದಲ್ಲಿ ಆಗಮಿಸಿದ್ದು,ತ್ವರಿತವಾಗಿ ಬೆಂಕಿಯನ್ನು ನಂದಿಸುವ ಮೂಲಕ ದೊಡ್ಡ ಅವಘಡವನ್ನು ತಡೆದಿದ್ದಾರೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News