×
Ad

ಫೆಲೆಸ್ತೀನ್‌ಗೆ ಬೆಂಬಲಕ್ಕೆ ಸೌದಿ ನೇತೃತ್ವದಲ್ಲಿ ಜಾಗತಿಕ ಉಪಕ್ರಮ

Update: 2025-09-25 20:34 IST

ನ್ಯೂಯಾರ್ಕ್, ಸೆ.25: ಎರಡು ರಾಷ್ಟ್ರಗಳ ಪರಿಹಾರ ಸೂತ್ರದ ಅನುಷ್ಠಾನಕ್ಕೆ ಆಗ್ರಹಿಸುವ ಸೌದಿ ಅರೇಬಿಯಾ ನೇತೃತ್ವದ ಜಾಗತಿಕ ಉಪಕ್ರಮವು ಶಾಂತಿ ಪ್ರಕ್ರಿಯೆಗೆ ಬೆಂಬಲ ಕ್ರೋಢೀಕರಿಸುವ ಕ್ರಮಗಳನ್ನು ತೀವ್ರಗೊಳಿಸಿದೆ.

ಸೌದಿ ಅರೇಬಿಯಾ ಕಳೆದ ವರ್ಷ ಸ್ಥಾಪಿಸಿರುವ `ಎರಡು ರಾಷ್ಟ್ರ ಪರಿಹಾರ ಅನುಷ್ಠಾನಕ್ಕಾಗಿನ ಜಾಗತಿಕ ಒಕ್ಕೂಟ'ದ ಉನ್ನತ ಮಟ್ಟದ ಸಭೆಯು ನ್ಯೂಯಾರ್ಕ್‌ನಲ್ಲಿ ಬುಧವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ನಡೆಯಿತು. ಸೌದಿಯ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್, ಯುರೋಪಿಯನ್ ಯೂನಿಯನ್(ಇಯು) ವಿದೇಶಾಂಗ ನೀತಿ ಮುಖ್ಯಸ್ಥೆ ಕಾಜಾ ಕಲ್ಲಾಸ್ ಮತ್ತು ನಾರ್ವೆಯ ವಿದೇಶಾಂಗ ಸಚಿವ ಎಸ್ಪೆನ್ ಬರ್ತ್ ಎಯ್ದೆ ಸಭೆಯ ಜಂಟಿ ನೇತೃತ್ವ ವಹಿಸಿದ್ದರು. ಗಾಝಾದಲ್ಲಿನ ಯುದ್ಧವನ್ನು ಕೊನೆಗೊಳಿಸುವ ಮತ್ತು ಎರಡು ರಾಷ್ಟ್ರಗಳ ಪರಿಹಾರ ಸೂತ್ರವನ್ನು ಬೆಂಬಲಿಸುವ 100ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.

ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಶಾಂತಿ ನೆಲೆಸುವುದು, ಕದನ ವಿರಾಮ ಒಪ್ಪಂದ, ಹಮಾಸ್‌ನ ನಿಶಸ್ತ್ರೀಕರಣ ಮತ್ತು ಒತ್ತೆಯಾಳುಗಳ ಬಿಡುಗಡೆ ತಕ್ಷಣದ ಅಗತ್ಯವಾಗಿದೆ. ಫೆಲೆಸ್ತೀನಿಯನ್ ಪ್ರಾಧಿಕಾರ(ಪಿಎ)ವನ್ನು ಬಲಪಡಿಸಲು ಮತ್ತು ಯುದ್ಧಾನಂತರದ ಸನ್ನಿವೇಶದಲ್ಲಿ ಗಾಝಾದಲ್ಲಿ ಪಿಎ ನೇತೃತ್ವದಲ್ಲಿ ಮಧ್ಯಂತರ ಸರಕಾರ ರಚನೆಯಾಗಬೇಕು ಎಂದು ಪ್ರತಿನಿಧಿಗಳು ಅಭಿಪ್ರಾಯ ಪಟ್ಟರು.

ಸೋಮವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆ(ಯುಎನ್ಜಿಎ) ಸ್ವೀಕರಿಸಿದ ನ್ಯೂಯಾರ್ಕ್ ಘೋಷಣೆಯ (ಎರಡು ರಾಜ್ಯಗಳ ಪರಿಹಾರವನ್ನು ಅನುಷ್ಠಾನಗೊಳಿಸುವತ್ತ ವಿವರವಾದ ಮಾರ್ಗಸೂಚಿ) ಮಹತ್ವವನ್ನು ಒತ್ತಿಹೇಳಿದ ಸೌದಿಯ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ` ಯುಎನ್ಜಿಎ ಘೋಷಣೆಯು ಎರಡು ರಾಷ್ಟ್ರಗಳ ಪರಿಹಾರವನ್ನು ದೃಢಪಡಿಸಲು ಸ್ಪಷ್ಟ ಮಾರ್ಗಸೂಚಿಯಾಗಿದೆ' ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News