ʼಇಸ್ರೇಲ್‌ಗೆ ಶಸ್ತ್ರಾಸ್ತ್ರಗಳ ಸಾಗಾಟʼ: ಇಟಲಿ ಮಾಧ್ಯಮಗಳ ಆರೋಪ ನಿರಾಕರಿಸಿದ ಸೌದಿ ಅರೇಬಿಯಾದ ಹಡಗು ಕಂಪೆನಿ
ಸಾಂದರ್ಭಿಕ ಚಿತ್ರ (credit:Grok)
ರಿಯಾದ್: ಸೌದಿ ಅರೇಬಿಯಾದ “ಬಹ್ರಿ ಯಾನ್ಬು”( Bahri Yanbu) ಎಂಬ ಹಡಗು ಇಸ್ರೇಲ್‌ಗೆ ಅಮೆರಿಕದಿಂದ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿತ್ತು. ಆದರೆ ಈ ಆರೋಪವನ್ನು ಹಡಗು ನಿರ್ವಹಣಾ ಕಂಪೆನಿ "ಬಹ್ರಿ" ಬಲವಾಗಿ ನಿರಾಕರಿಸಿದೆ.
ಬಹ್ರಿ ತನ್ನ ವೆಬ್‌ಸೈಟ್‌ನಲ್ಲಿ ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತ ಎಂದು ಹೇಳಿದೆ.
“ಫೆಲೆಸ್ತೀನ್‌ಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾದ ನೀತಿಗೆ ಮತ್ತು ಸಮುದ್ರ ಮಾರ್ಗಗಳ ಮೂಲಕ ಸಾರಿಗೆಗೆ ಸಂಬಂಧಿಸಿದ ಎಲ್ಲಾ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ನಿಯಮಗಳನ್ನು ಪಾಲಿಸುತ್ತಿದ್ದೇವೆ. ಇಸ್ರೇಲ್‌ಗೆ ಯಾವುದೇ ಸರಕು ಅಥವಾ ಸಾಗಣೆಗಳನ್ನು ಎಂದಿಗೂ ಸಾಗಿಸಿಲ್ಲ. ಅಂತಹ ಯಾವುದೇ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿಲ್ಲ. ನಮ್ಮ ಎಲ್ಲಾ ಕಾರ್ಯಾಚರಣೆಗಳು ಸ್ಪಷ್ಟ ಮತ್ತು ನಿಯಮಾನುಸಾರ ನಡೆಯುತ್ತದೆ” ಎಂದು ಬಹ್ರಿ ಕಂಪೆನಿ ತಿಳಿಸಿದೆ.
ಕಂಪೆನಿಯ ಹೆಸರಿಗೆ ಹಾನಿ ಮಾಡುವ ಅಥವಾ ತಪ್ಪಾಗಿ ಚಿತ್ರಿಸುವ ಯಾವುದೇ ನಿರೂಪಣೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧವಾಗಿರುವುದಾಗಿ ಕಂಪೆನಿ ಹೇಳಿದೆ.
ಅಮೆರಿಕದಿಂದ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದೆ ಎಂದು ಹೇಳಲಾದ “ಬಹ್ರಿ ಯಾನ್ಬು” ಎಂಬ ಸೌದಿ ಹಡಗನ್ನು ಜಿನೋವಾ ಬಂದರಿನಲ್ಲಿ ತಡೆಯಲಾಗಿದೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿತ್ತು.