ಮೊದಲ ಬಾರಿ ಟಿಆರ್‌ಎಫ್ ಹೆಸರು ಉಲ್ಲೇಖಿಸಿದ ಭದ್ರತಾ ಮಂಡಳಿ ನಿರ್ಬಂಧ ತಂಡ
ಹೊಸದಿಲ್ಲಿ: ಪಾಕಿಸ್ತಾನ ಮೂಲದ “ದ ರೆಸಿಸ್ಟನ್ಸ್ ಫ್ರಂಟ್” (ಟಿಆರ್ಎಫ್) ಉಗ್ರ ಸಂಘಟನೆಯ ಹೆಸರನ್ನು ಮೊದಲ ಬಾರಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧ ಸಮಿತಿಯ ನಿಗಾ ತಂಡ ಹೆಸರಿಸಿದೆ. ಟಿಆರ್ಎಫ್ ತನ್ನ ಹೇಳಿಕೆ ವಾಪಾಸು ಪಡೆಯುವ ಮುನ್ನ ಎರಡು ಬಾರಿ ಪಹಲ್ಗಾಮ್ ದಾಳಿಯ ಹೊಣೆ ಹೊತ್ತಿತ್ತು ಎಂಬ ಅಂಶವನ್ನು ಉಲ್ಲೇಖಿಸಿದೆ. ಇದಕ್ಕೂ ಮುನ್ನ ಅಮೆರಿಕ ಈ ತಿಂಗಳ ಆರಂಭದಲ್ಲಿ ವಿದೇಶಿ ಉಗ್ರ ಸಂಘಟನೆಯ ಪಟ್ಟಿಯಲ್ಲಿ ಟಿಆರ್ಎಫ್ ಹೆಸರು ಸೇರಿಸಿತ್ತು.
ಭಾರತೀಯ ಅಧಿಕಾರಿಗಳು ಇದನ್ನು ರಾಜತಾಂತ್ರಿಕ ಗೆಲುವು ಎಂದು ಬಣ್ಣಿಸಿದ್ದಾರೆ. ಲಷ್ಕರ್-ಇ-ತೊಯ್ಬಾದ ನಕಲಿ ಸಂಘಟನೆಯನ್ನು ಮೊಟ್ಟಮೊದಲ ಬಾರಿಗೆ ವಿಶ್ವಸಂಸ್ಥೆಯ ದಾಖಲೆಗಳಲ್ಲಿ ಹೆಸರಿಸಲಾಗಿದೆ ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗೆಗಿನ ಚರ್ಚೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಕೂಡಾ ಈ ಬಗ್ಗೆ ಹೇಳಿಕೆ ನೀಡಿ, ಟಿಆರ್ಎಫ್ ಇಂದು ಉಗ್ರ ಸಂಘಟನೆ ಎನ್ನುವುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಗಾ ತಂಡ ಒಪ್ಪಿಕೊಂಡಿರುವುದು ಭಾರತದ ರಾಜತಾಂತ್ರಿಕ ವಿಜಯ ಎಂದು ವಿಶ್ಲೇಷಿಸಿದರು.
2019ರಲ್ಲಿ ಪುಲ್ವಾಮಾ ದಾಳಿ ನಡೆದ ಬಳಿಕ ಆ ವರ್ಷದ ಜುಲೈನಲ್ಲಿ ಸಿದ್ಧಪಡಿಸಿದ ವರದಿಯಲ್ಲಿ ದಾಳಿಯ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ. ಟಿಆರ್ಎಫ್ ನಿಷೇಧದ ಸಂಬಂಧ 2023ರ ಡಿಸೆಂಬರ್ ನಿಂದ ನಿಗಾ ತಂಡದ ಜತೆ ಭಾರತ ಕಾರ್ಯ ನಿರ್ವಹಿಸುತ್ತಿದೆ. ಟಿಆರ್ಎಫ್ -ಎಲ್ಇಟಿ ಸಂಪರ್ಕಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿತ್ತು; ಆದರೆ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ಕಾಯಮೇತರ ಸದಸ್ಯತ್ವದ ಅವಧಿ ಕೊನೆಗೊಳ್ಳುವ ವರೆಗೆ ಇದು ಫಲಪ್ರದಾಗದು.
ಜುಲೈ 29ರ ದಿನಾಂಕದ ವರದಿಯಲ್ಲಿ ದಾಳಿಯ ಸ್ಥಳದ ಬಗೆಗೆ ಟಿಆರ್ಎಫ್ ಪ್ರಕಟಿಸಿದ ಫೋಟೊವನ್ನು ಗಮನಿಸಲಾಗಿದ್ದು, ಈ ಗುಂಪು ತನ್ನ ಹೇಳಿಕೆಯಿಂದ ಹಿಂದೆ ಸರಿಯುವ ಮುನ್ನ, ತಂಡದ ಸದಸ್ಯರಿಂದ ಯಾವ ಸಂಪರ್ಕವೂ ಇರಲಿಲ್ಲ; ಯಾವುದೇ ಇತರ ಗುಂಪುಗಳು ಇದರ ಹೊಣೆ ಹೊತ್ತಿರಲಿಲ್ಲ ಎಂದು ವರದಿ ಉಲ್ಲೇಖಿಸಿದೆ.