×
Ad

ಇಸ್ರೇಲ್-ಹಮಾಸ್ ಯುದ್ಧ ಕುರಿತು ಸುಳ್ಳು ಸುದ್ದಿಗಳಿಂದ ತುಂಬಿವೆ ಸಾಮಾಜಿಕ ಮಾಧ್ಯಮಗಳು

Update: 2023-10-11 20:53 IST

Photo: PTI

ಹೊಸದಿಲ್ಲಿ: ಶನಿವಾರ ಇಸ್ರೇಲ್ ಮೇಲೆ ಹಮಾಸ್ ದಾಳಿಯ ಬಳಿಕ ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂಘರ್ಷದ ಕುರಿತು ಸುಳ್ಳು ವೀಡಿಯೊಗಳು,ಚಿತ್ರಗಳ ಮತ್ತು ತಪ್ಪು ಮಾಹಿತಿಗಳ ಮಹಾಪೂರವೇ ಹರಿದು ಬಂದಿತ್ತು.

ಮಸ್ಕ್ ಜೊತೆ ಆಗಾಗ್ಗೆ ಸಂವಹನ ನಡೆಸುತ್ತಿರುವ ತೀವ್ರ ಬಲಪಂಥೀಯ ವ್ಯಾಖ್ಯಾನಕಾರ ಇಯಾನ್ ಮೈಲ್ಸ್ ಚಿಯಾಂಗ್ ಅವರು ಫೆಲೆಸ್ತೀನಿ ಹೋರಾಟಗಾರರು ಇಸ್ರೇಲ್ ನಾಗರಿಕರನ್ನು ಕೊಲ್ಲುತ್ತಿರುವ ದೃಶ್ಯ ಎಂದು ಬಣ್ಣಿಸಿ ವೀಡಿಯೊವೊಂದನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು ‘ಇದು ನಮ್ಮ ನೆರೆಹೊರೆಯಲ್ಲಿ ಅಥವಾ ನಿಮ್ಮ ಕುಟುಂಬದೊಂದಿಗೆ ನಡೆಯುತ್ತಿದ್ದರೆ ಹೇಗಾಗುತ್ತದೆ ಎನ್ನುವುದನ್ನು ಊಹಿಸಿ’ ಎಂದು ಬರೆದುಕೊಂಡಿದ್ದರು.

ವೀಡಿಯೊದಲ್ಲಿರುವ ಜನರು ಹಮಾಸ್ ಹೋರಾಟಗಾರರಲ್ಲ, ಇಸ್ರೇಲಿ ಕಾನೂನು ಜಾರಿ ಅಧಿಕಾರಿಗಳು ಎಂದು ಸಮುದಾಯ ಟಿಪ್ಪಣಿಯೊಂದು ಹೇಳಿತ್ತು. ಸಮುದಾಯ ಟಿಪ್ಪಣಿಯು ಪೋಸ್ಟ್‌ಗಳಿಗೆ ಸಂದರ್ಭಗಳನ್ನು ಸೇರಿಸಲು ಬಳಕೆದಾರರಿಗೆ ಅವಕಾಶ ನೀಡಿರುವ ಎಕ್ಸ್‌ನ ವೈಶಿಷ್ಟ್ಯವಾಗಿದೆ.

ಆದರೆ ವೀಡಿಯೋ ಈಗಲೂ ಎಕ್ಸ್‌ನಲ್ಲಿ ಹರಿದಾಡುತ್ತಿದೆ ಮತ್ತು ಲಕ್ಷಾಂತರ ಜನರು ಅದನ್ನು ವೀಕ್ಷಿಸಿದ್ದಾರೆ. ಇತರ ನೂರಾರು ಎಕ್ಸ್ ಖಾತೆಗಳೂ ಅದನ್ನು ಹಂಚಿಕೊಂಡಿವೆ, ಈ ಪೈಕಿ ಕೆಲವು ಚೆಕ್ ಮಾರ್ಕ್‌ಗಳೊಂದಿಗೆ ದೃಢೀಕರಿಸಲ್ಪಟ್ಟಿವೆ.

ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಕುರಿತು ತಪ್ಪು ಮಾಹಿತಿ,ಉದ್ದೇಶಪೂರ್ವಕ ಸುಳ್ಳುಸುದ್ದಿಗಳು ಫೇಸ್‌ಬುಕ್,ಇನ್‌ಸ್ಟಾಗ್ರಾಂ ಮತ್ತು ಟಿಕ್‌ಟಾಕ್‌ನಂತಹ ಇತರ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಡಿವೆ.

ವಾರಾಂತ್ಯದಲ್ಲಿ ಸಂಘರ್ಷದ ಕುರಿತು ಐದು ಕೋಟಿಗೂ ಅಧಿಕ ಪೋಸ್ಟ್‌ಗಳು ತನ್ನ ಪ್ಲ್ಯಾಟ್‌ಫಾರ್ಮ್‌ನಲ್ಲಿವೆ ಎಂದು ಎಕ್ಸ್ ಸೋಮವಾರ ಘೋಷಿಸಿತ್ತು.

ಗ್ರಾಫಿಕ್ ಮಾಧ್ಯಮ ಮತ್ತು ದ್ವೇಷಭಾಷಣಗಳನ್ನು ಹಂಚಿಕೊಳ್ಳಲು ಸಾವಿರಾರು ಪೋಸ್ಟ್‌ಗಳನ್ನು ಹೆಚ್ಚಿಸಿದ್ದ, ಹೊಸದಾಗಿ ಸೃಷ್ಟಿಸಲಾಗಿದ್ದ ಹಮಾಸ್‌ನೊಂದಿಗೆ ಸಂಯೋಜಿತ ಖಾತೆಗಳನ್ನು ತಾನು ತೆಗೆದುಹಾಕಿರುವುದಾಗಿ ಮತ್ತು ಯಾವುದು ಸುದ್ದಿಯೋಗ್ಯ ಎನ್ನುವುದನ್ನು ಪರಿಗಣಿಸುವ ತನ್ನ ನೀತಿಗಳನ್ನು ಪರಿಷ್ಕರಿಸಿರುವುದಾಗಿ ಎಕ್ಸ್ ಪ್ರತಿಕ್ರಿಯಿಸಿದೆ.

ಕಳೆದ ಕೆಲವು ವರ್ಷಗಳಿಂದ ದುಷ್ಟ ಶಕ್ತಿಗಳು ನೈಜ-ಜಾಗತಿಕ ಸಂಘರ್ಷಗಳಿಗೆ ಪ್ರತಿಕ್ರಿಯೆಯಾಗಿ ತಪ್ಪು ಮಾಹಿತಿಗಳನ್ನು ಹರಡಲು ಸಾಮಾಜಿಕ ಮಾಧ್ಯಮಗಳನ್ನು ಪದೇಪದೇ ಬಳಸಿಕೊಳ್ಳುತ್ತಿವೆ. ಈ ವಾರ ಎಕ್ಸ್‌ನಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿಕೊಂಡಿದ್ದ ‘ದಿ ಇಂಡಿಯನ್ ಮುಸ್ಲಿಮ್’ ಎಂಬ ಬಳಕೆದಾರ ಅದಕ್ಕೆ ‘ಮೋರ್ ಪವರ್ ಟು ಯು #ಹಮಾಸ್ ’ಎಂಬ ಅಡಿ ಬರಹವನ್ನು ನೀಡಿದ್ದ. ಹಮಾಸ್ ಹೋರಾಟಗಾರ ರಾಕೆಟ್ ಉಡಾಯಿಸಿ ಇಸ್ರೇಲಿ ಹೆಲಿಕಾಪ್ಟರ್‌ನ್ನು ಉರುಳಿಸಿದ್ದನ್ನು ವೀಡಿಯೊ ತೋರಿಸುತ್ತದೆ ಎಂದು ಹೇಳಿಕೊಂಡಿದ್ದ.

ಈ ತುಣುಕು ಅರ್ಮಾ 3 ಎಂಬ ವಿಡಿಯೊ ಗೇಮ್‌ನಿಂದ ಆಯ್ದುಕೊಳ್ಳಲಾಗಿದೆ ಎಂದು ಹಲವಾರು ತಪ್ಪು ಮಾಹಿತಿ ಸಂಶೋಧಕರು ಸಾಮಾಜಿಕ ಮಾಧ್ಯಮಗಳಲ್ಲಿ ಬೆಟ್ಟು ಮಾಡಿದ್ದಾರೆ. ಸಮುದಾಯ ಟಿಪ್ಪಣಿಗಳನ್ನು ಹೊಂದಿರುವ ಈ ಪೋಸ್ಟ್ ಈಗಲೂ ಎಕ್ಸ್‌ನಲ್ಲಿ ಹರಿದಾಡುತ್ತಿದ್ದು,ಐದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹೊಂದಿದೆ.

ಬ್ರಿಟಿಷ್ ಸಾಮಾಜಿಕ ಮಾಧ್ಯಮ ಪ್ರಭಾವಿ ಜಿಮ್ ಫರ್ಗ್ಯೂಸನ್ ಪೋಸ್ಟ್ ಮಾಡಿರುವ ಇನ್ನೊಂದು ಚಿತ್ರಸಹಿತ ಪೋಸ್ಟ್ ‘ಅಫ್ಘಾನಿಸ್ತಾನದಲ್ಲಿ ತೊರೆಯಲಾಗಿದ್ದ ಅಮೆರಿಕನ್ ಶಸ್ತಾಸ್ತ್ರಗಳನ್ನು ಹಮಾಸ್ ಇಸ್ರೇಲ್ ಮೇಲೆ ದಾಳಿಗೆ ಬಳಸುತ್ತಿದೆ ’ ಎಂದು ಹೇಳಿಕೊಂಡಿತ್ತು. ಆದರೆ ಸಮುದಾಯ ಟಿಪ್ಪಣಿಗಳಂತೆ ಈ ಚಿತ್ರವು 2021ರದ್ದಾಗಿದ್ದು,ತಾಲಿಬಾನ್ ಸೈನಿಕರನ್ನು ತೋರಿಸುತ್ತಿದೆ. ಈ ಪೋಸ್ಟ್ ಈಗಲೂ ಎಕ್ಸ್‌ನಲ್ಲಿ ಲಭ್ಯವಿದ್ದು, ಒಂದು ಕೋಟಿಗೂ ಅಧಿಕ ಅಧಿಕ ವೀಕ್ಷಣೆಗಳನ್ನು ಹೊಂದಿದೆ.

ಹಳೆಯ ಮತ್ತು ಮರುಬಳಕೆಯ ವೀಡಿಯೊ ತುಣುಕುಗಳನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹರಿಬಿಡಲಾಗುತ್ತಿದ್ದು, ಯಾವುದು ನಿಜ ಮತ್ತು ಯಾವುದು ಸುಳ್ಳು ಎನ್ನುವುದನ್ನು ತಿಳಿದುಕೊಳ್ಳಲು ಬಳಕೆದಾರರಿಗೆ ಕಠಿಣವಾಗುತ್ತಿದೆ. ದಾಳಿಯ ಕುರಿತು ಸುಳ್ಳು ಸುದ್ದಿಗಳು ಸಾಮಾಜಿಕ ಮಾಧ್ಯಮಗಳ ನಡುವೆಯೂ ಹರಿದಾಡುತ್ತಿವೆ. ಕೆಲವು ಟಿಕ್‌ಟಾಕ್ ವೀಡಿಯೊಗಳು ಎಕ್ಸ್‌ನಲ್ಲಿ ಕಂಡು ಬರುತ್ತಿದ್ದರೆ ಟೆಲಿಗ್ರಾಮ್‌ನಲ್ಲಿ ಮೊದಲು ಕಾಣಿಸಿಕೊಳ್ಳುವ ಕೆಲವು ತುಣುಕುಗಳು ಬಳಿಕ ಎಕ್ಸ್‌ನಲ್ಲಿಯೂ ಹರಿದಾಡುತ್ತಿವೆ.

ಕೃಪೆ: aljazeera.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News