ಅಮೆರಿಕದಲ್ಲಿ ಸೊಮಾಲಿ ಮೂಲದ ಉಬರ್ ಚಾಲಕ ಮೃತ್ಯು: ಭಾರತೀಯ ಮೂಲದ ವ್ಯಕ್ತಿ ವಿರುದ್ಧ ಕೊಲೆ ಆರೋಪ
ಜನಾಂಗೀಯ ದ್ವೇಷದ ಸಾಧ್ಯತೆ ಬಗ್ಗೆ ಆರೋಪಿಸಿದ ಕುಟುಂಬ
Photo Source: X.com/@1NationMediaX
ನ್ಯೂಯಾರ್ಕ್: ಸೊಮಾಲಿ-ಅಮೆರಿಕನ್ ಉಬರ್ ಚಾಲಕ ಮೊಹಮ್ಮದ್ ಯೂಸುಫ್ (51) ಅವರ ಸಾವಿನ ಪ್ರಕರಣದಲ್ಲಿ ಭಾರತೀಯ ಮೂಲದ 25 ವರ್ಷದ ಸಮಿತ್ ಅಪೂರ್ವ ಪಟೇಲ್ ವಿರುದ್ಧದ ಕೊಲೆಯತ್ನ ಆರೋಪವನ್ನು ಎರಡನೇ ಹಂತದ ಉದ್ದೇಶಪೂರ್ವಕ ಕೊಲೆ ಆರೋಪವಾಗಿ ಬದಲಾಯಿಸಲಾಗುವುದು ಎಂದು ಸರ್ಕಾರಿ ಅಭಿಯೋಜಕರು ತಿಳಿಸಿದ್ದಾರೆ.
ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಷನ್ಸ್ (CAIR) ನೀಡಿರುವ ಮಾಹಿತಿಯ ಪ್ರಕಾರ, ಯೂಸುಫ್ ಅವರು ಶನಿವಾರ ಬೆಳಿಗ್ಗೆ ಮಿನ್ನೇಸೋಟದ ಹೆನ್ನೆಪಿನ್ ಕೌಂಟಿ ಮೆಡಿಕಲ್ ಸೆಂಟರ್ ನಲ್ಲಿ ಮೃತಪಟ್ಟಿದ್ದಾರೆ. ನ. 14ರಂದು ಮಿನ್ನಿಯಾಪೊಲಿಸ್ ನ ಹಾಪ್ಕಿನ್ಸ್ ಉಪನಗರದಲ್ಲಿ ನಡೆದ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಪ್ರಯಾಣಿಕನೊಬ್ಬ ಸೀಟ್ಬೆಲ್ಟ್ ನಿಂದ ಯೂಸುಫ್ ಅವರ ಕತ್ತು ಬಿಗಿದು, ಬಳಿಕ ಅವರದೇ ಕಾರಿನಿಂದ ಅವರ ಮೇಲೆ ಹರಿಸಿ, ಕಾಲುವೆಯೊಂದರಲ್ಲಿ ಎಸೆದು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ ಅವರ ಪಕ್ಕೆಲುಬುಗಳು ಮತ್ತು ಕಾಲು ಮುರಿದಿದ್ದವು. ಬೆನ್ನುಮೂಳೆಗೆ ಗಾಯವಾಗಿತ್ತು. ಶ್ವಾಸಕೋಶಕ್ಕೆ ಹಾನಿಯಾಗಿ, ಆಂತರಿಕ ರಕ್ತಸ್ರಾವವೂ ಉಂಟಾಗಿತ್ತು. ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರೂ ಅವರು ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ.
ಹೆನ್ನೆಪಿನ್ ಕೌಂಟಿ ಅಟಾರ್ನಿ ಮೇರಿ ಮೊರಿಯಾರ್ಟಿ ಅವರು ಪಟೇಲ್ ವಿರುದ್ಧದ ಆರೋಪವನ್ನು ಉದ್ದೇಶಪೂರ್ವಕ ಕೊಲೆ ಎಂದು ಬದಲಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ಪಟೇಲ್ ಪರ ವಕೀಲೆ ಕ್ಯಾಥರೀನ್ ಟರ್ನರ್ ಪ್ರತಿಕ್ರಿಯಿಸಿ, ಯೂಸುಫ್ ಅವರ ಸಾವಿಗೆ ತಮ್ಮ ಕಕ್ಷಿದಾರರು ಸಂತಾಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿರುವುದರಿಂದ, ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ತನಿಖೆ ಪೂರ್ಣಗೊಳ್ಳುವವರೆಗೆ ಕಾಯುವಂತೆ ಪಟೇಲ್ ಮತ್ತು ಅವರ ಕುಟುಂಬ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ ಎಂದು ಅವರು ಇಮೇಲ್ ನಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ನ. 14ರ ಮುಂಜಾನೆ ಯೂಸುಫ್ ಪ್ರಯಾಣಿಕನೊಬ್ಬನನ್ನು ತಮ್ಮ ಕಾರಿನಲ್ಲಿ ಹತ್ತಿಸಿಕೊಂಡಾಗ, ತಮ್ಮ ಸಹೋದರನೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದರು. ಅವರ ಸಹೋದರನೂ ಉಬರ್ ಚಾಲಕರಾಗಿದ್ದಾರೆ.
ಪ್ರಯಾಣಿಕ ಯೂಸುಫ್ ಅವರ ಹೆಸರನ್ನು ಕೇಳಿದ್ದನ್ನು ಸಹೋದರ ಕೇಳಿಸಿಕೊಂಡಿದ್ದರು. ಯೂಸುಫ್ ತಮ್ಮ ಹೆಸರು ಮೊಹಮ್ಮದ್ ಎಂದು ಹೇಳಿದಾಗ, ಆ ಹೆಸರು ತನಗೆ ಇಷ್ಟವಿಲ್ಲ ಎಂದು ಪ್ರಯಾಣಿಕ ಪ್ರತಿಕ್ರಿಯಿಸಿದ್ದಾನೆ ಎನ್ನಲಾಗಿದೆ.
ಇದಾದ ಬಳಿಕ ಯೂಸುಫ್ ಸೊಮಾಲಿ ಭಾಷೆಯಲ್ಲಿ ಕಿರುಚುತ್ತಾ, ಯಾರೋ ತಮ್ಮನ್ನು ಬೆಲ್ಟ್ ನಿಂದ ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುವುದನ್ನು ಸಹೋದರ ಕೇಳಿಸಿಕೊಂಡಿದ್ದಾರೆ. ಪ್ರಯಾಣಿಕ ತಮ್ಮ ಕಾರನ್ನು ತಮ್ಮ ಮೇಲೆಯೇ ಹರಿಸುತ್ತಿದ್ದಾನೆ ಎಂದೂ ಯೂಸುಫ್ ಹೇಳಿದ್ದರು ಎಂದು ನ್ಯಾಯಾಲಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.
ಯೂಸುಫ್ ಅವರ ಸ್ಮಾರ್ಟ್ವಾಚ್ ನ ಸ್ಥಳ ಮಾಹಿತಿ ಆಧರಿಸಿ ತನಿಖಾಧಿಕಾರಿಗಳು ಹಾಪ್ಕಿನ್ಸ್ ಕ್ರಾಸ್ರೋಡ್ ಮತ್ತು ಮಿನ್ನೆಟೊಂಕಾ ಬೌಲೆವಾರ್ಡ್ ಬಳಿಯ ಹಳ್ಳದಲ್ಲಿ ಅವರನ್ನು ಪತ್ತೆಹಚ್ಚಿದರು. ರಸ್ತೆಯಿಂದ ಸುಮಾರು 15 ಅಡಿ ದೂರದಲ್ಲಿ ಅವರು ಬಿದ್ದಿದ್ದರು. ಅವರ ಮೊಬೈಲ್ ಫೋನ್ ಕಾರಿನ ಒಳಗೆ ಪತ್ತೆಯಾಗಿತ್ತು. ಆಗಲೂ ಸಹೋದರನೊಂದಿಗಿನ ಫೋನ್ ಕರೆ ಸಂಪರ್ಕದಲ್ಲಿತ್ತು.
ನ. 14ರಂದು ಮುಂಜಾನೆ 1.20ರ ಸುಮಾರಿಗೆ ಅನುಮಾನಾಸ್ಪದ ವಾಹನದ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದ ಯೂಸುಫ್ ಅವರನ್ನು ಪತ್ತೆಹಚ್ಚಿದರು. ಸಮೀಪದಲ್ಲೇ ಓರ್ವ ಶಂಕಿತನನ್ನೂ ವಶಕ್ಕೆ ಪಡೆದರು.
ಪಟೇಲ್ ನನ್ನು ಬಂಧಿಸಿದ ಪೊಲೀಸರು ಆರಂಭದಲ್ಲಿ ಕೊಲೆಯತ್ನ ಮತ್ತು ಕಾರು ಅಪಹರಣದ ಆರೋಪ ಹೊರಿಸಿದ್ದರು. ಬಳಿಕ ನ್ಯಾಯಾಧೀಶರು ಅಭಿಯೋಜಕರು ಶಿಫಾರಸು ಮಾಡಿದ್ದ 8 ಲಕ್ಷ ಡಾಲರ್ ಮೊತ್ತದ ಬಾಂಡ್ ಮೇಲೆ ಜಾಮೀನು ವಿಧಿಸಿದ್ದರು. ಕುಟುಂಬದವರು ಬಾಂಡ್ ಮೊತ್ತ ಪಾವತಿಸಿದ ಬಳಿಕ ಪಟೇಲ್ ಬಂಧನದಿಂದ ಬಿಡುಗಡೆಯಾಗಿದ್ದನು ಎಂದು ತಿಳಿದು ಬಂದಿದೆ.
ಬಿಡುಗಡೆಯ ವೇಳೆ ಎಲೆಕ್ಟ್ರಾನಿಕ್ ಸಾಧನದ ಮೂಲಕ ಆತನ ಚಲನವಲನದ ಮೇಲೆ ನಿಗಾ ಇರಿಸುವುದು, ಮದ್ಯಪಾನ ಮತ್ತು ಅಕ್ರಮ ಮಾದಕವಸ್ತುಗಳ ಬಳಕೆ ಮಾಡದಿರುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿತ್ತು. ಡಿ. 16ರಂದು ಪಟೇಲ್ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಲಿದ್ದಾನೆ.
ಕ್ರಿಮಿನಲ್ ದೂರಿನ ಪ್ರಕಾರ, ಪಟೇಲ್ ಮನೆಗೆ ಹಿಂದಿರುಗಿದ ಬಳಿಕ ಆತನ ಪೋಷಕರು ಪೊಲೀಸರನ್ನು ಸಂಪರ್ಕಿಸಿದ್ದರು. ಮನೆಯ ಹೊರಗೆ ಅಪರಿಚಿತ ವಾಹನ ನಿಂತಿರುವ ಬಗ್ಗೆ ಮತ್ತು ಪಟೇಲ್ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ಬಗ್ಗೆ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮದ್ಯಪಾನ ಮಾಡಿದ್ದಾಗಿ ಪಟೇಲ್ ಪೊಲೀಸರಿಗೆ ತಿಳಿಸಿದ್ದನು. ಅಲ್ಲದೆ, ತಾನು ಏನೋ ಕೆಟ್ಟ ಕೆಲಸ ಮಾಡಿದ್ದೇನೆ ಎಂದೂ ಹೇಳಿದ್ದ ಎಂದು ಕ್ರಿಮಿನಲ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪಟೇಲ್ ವಿರುದ್ಧ ಗಂಭೀರ ಕ್ರಿಮಿನಲ್ ದಾಖಲೆಗಳಿಲ್ಲ, ಆತ ಪದವೀಧರ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಉದ್ಯೋಗ ಹೊಂದಿಲ್ಲ ಎಂಬ ಅಂಶಗಳನ್ನು ಮುಂದಿಟ್ಟುಕೊಂಡು ರಕ್ಷಣಾ ವಕೀಲ ಮೈಕೆಲ್ ಹಾಲೆಂಡ್ ಈ ಹಿಂದೆ 20,000 ಡಾಲರ್ ಗಿಂತ ಹೆಚ್ಚಿನ ಜಾಮೀನು ವಿಧಿಸದಂತೆ ಕೋರಿದ್ದರು. ಆದರೆ, ಪ್ರಕರಣದಲ್ಲಿನ ಆರೋಪಗಳ ಬಗ್ಗೆ ನ್ಯಾಯಾಧೀಶರು ಅಚ್ಚರಿ ವ್ಯಕ್ತಪಡಿಸಿದ್ದರು.
ಜನಾಂಗೀಯ ದ್ವೇಷದ ಸಾಧ್ಯತೆ ಬಗ್ಗೆ ಆರೋಪಿಸಿದ ಕುಟುಂಬ:
ಯೂಸುಫ್ ಅವರ ಹೆಸರು ಕೇಳಿದ ಬಳಿಕ ಪ್ರಯಾಣಿಕ ಆ ಹೆಸರು ತನಗೆ ಇಷ್ಟವಿಲ್ಲ ಎಂದು ಹೇಳಿದ್ದಾನೆ ಎನ್ನಲಾದ ಸಂಗತಿಯು ಪ್ರಕರಣದಲ್ಲಿ ಜನಾಂಗೀಯ ದ್ವೇಷದ ಸಾಧ್ಯತೆಯ ಬಗ್ಗೆ ಅನುಮಾನ ಹುಟ್ಟುಹಾಕಿದೆ.
ಯೂಸುಫ್ ಅವರ ಕುಟುಂಬ ಮತ್ತು ಸೊಮಾಲಿ ಸಮುದಾಯದ ನಾಯಕರು ದಾಳಿಯ ಹಿಂದೆ ಸೊಮಾಲಿ ವಿರೋಧಿ ಪೂರ್ವಗ್ರಹವಿದೆಯೇ ಎಂಬುದನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಆದರೆ, ಈ ದಾಳಿ ಜನಾಂಗೀಯ ದ್ವೇಷದಿಂದ ನಡೆದಿತ್ತು ಎಂಬುದನ್ನು ಸಾಬೀತುಪಡಿಸಲು ತಮ್ಮ ಬಳಿ ಸಾಕಷ್ಟು ಪುರಾವೆಗಳಿಲ್ಲ ಎಂದು ಹೆನ್ನೆಪಿನ್ ಕೌಂಟಿ ಅಟಾರ್ನಿ ಮೇರಿ ಮೊರಿಯಾರ್ಟಿ ತಿಳಿಸಿದ್ದಾರೆ.
ಯೂಸುಫ್ ಅವರ ಹೆಸರಿನ ಕುರಿತು ಮಾಡಲಾದ ಹೇಳಿಕೆ ಆತಂಕಕಾರಿಯಾಗಿದೆ. ಆದರೆ, ಆ ಒಂದು ಹೇಳಿಕೆಯನ್ನು ಮಾತ್ರ ಆಧರಿಸಿ ದಾಳಿಯ ಹಿಂದೆ ಜನಾಂಗೀಯ ದ್ವೇಷವಿತ್ತು ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ಅಭಿಯೋಜಕರು ಹೇಳಿದ್ದಾರೆ.
ಯೂಸುಫ್ ಅವರ ಸಾವಿನಿಂದ ಮಿನ್ನೇಸೋಟದ ಸೊಮಾಲಿ ಸಮುದಾಯದಲ್ಲಿ ಆತಂಕ ಹೆಚ್ಚಾಗಿದೆ. ಅಮೆರಿಕದಲ್ಲಿ ಅತಿ ಹೆಚ್ಚು ಸೊಮಾಲಿ ಜನಸಂಖ್ಯೆ ಹೊಂದಿರುವ ರಾಜ್ಯ ಮಿನ್ನೇಸೋಟ. ಈ ಸಮುದಾಯದ ಬಹುತೇಕರು ಮಿನ್ನಿಯಾಪೊಲಿಸ್-ಸೇಂಟ್ ಪಾಲ್ ಮಹಾನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.