ಸೊಮಾಲಿಯಾದಲ್ಲಿ ಪ್ರವಾಹ; 31 ಮಂದಿ ಮೃತ್ಯು, 5 ಲಕ್ಷ ಮಂದಿಯ ಸ್ಥಳಾಂತರ
Pic courtesy: X/@IOM_Somalia
ಮೊಗದಿಶು: ಸೊಮಾಲಿಯಾದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ದಿಢೀರ್ ಪ್ರವಾಹ ಉಂಟಾಗಿದ್ದು 31 ಮಂದಿ ಮೃತಪಟ್ಟಿದ್ದಾರೆ. ಮನೆಗಳು ಹಾಗೂ ಕೃಷಿ ಭೂಮಿ ಜಲಾವೃತಗೊಂಡಿದ್ದು 5 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ಇಲಾಖೆ ಹೇಳಿದೆ.
`ಆಫ್ರಿಕಾದ ಕೋಡು' ಎಂದು ಕರೆಸಿಕೊಳ್ಳುವ ಸೊಮಾಲಿಯಾದಲ್ಲಿ ಎಲ್‍ನಿನೊ(ಹವಾಮಾನ ವಿದ್ಯಮಾನ)ದ ಪರಿಣಾಮ ಈ ತಿಂಗಳಾರಂಭದಿಂದಲೂ ಭಾರೀ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಹಲವೆಡೆ ಮನೆ, ಕಟ್ಟಡಗಳಿಗೆ ಹಾನಿಯಾಗಿದ್ದು 31 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ದುರ್ಗಮ ಪ್ರದೇಶಗಳಿಂದ ಸಾವು-ನೋವಿನ ಬಗ್ಗೆ ಮಾಹಿತಿ ಲಭಿಸದ ಕಾರಣ ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ದಕ್ಷಿಣ ಸೊಮಾಲಿಯಾದ ಕೇಂದ್ರ ಹಿರನ್ ಪ್ರಾಂತದಲ್ಲಿ ಶಾಬೆಲ್ ನದಿ ಉಕ್ಕೇರಿ ಹರಿದು ಹಲವು ರಸ್ತೆಗಳು ನೆರೆನೀರಿನಲ್ಲಿ ಮುಳುಗಿದ್ದು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಬೆಲೆದ್‍ವೆಯ್ನ್ ನಗರದಲ್ಲಿ ಮನೆಗಳು, ಆಸ್ತಿಗಳಿಗೆ ಹಾನಿಯಾಗಿದೆ.
ಸೊಮಾಲಿಯಾ ಶತಮಾನಗಳಲ್ಲೇ ದಾಖಲೆ ಮಟ್ಟದ ಪ್ರವಾಹದ ಅಪಾಯದಲ್ಲಿದ್ದು ಸುಮಾರು 1.6 ದಶಲಕ್ಷ ಜನರ ಮೇಲೆ ಪರಿಣಾಮ ಬೀರಬಹುದು ಎಂದು ಕಳೆದ ವಾರ ವಿಶ್ವಸಂಸ್ಥೆಯ ಮಾನವೀಯ ನೆರವಿನ ಏಜೆನ್ಸಿ ಎಚ್ಚರಿಕೆ ನೀಡಿತ್ತು.