ಸುಡಾನ್ | ಆಸ್ಪತ್ರೆಯ ಮೇಲೆ ಅರೆ ಸೇನಾಪಡೆ ದಾಳಿ; 8 ಮಂದಿಯ ಅಪಹರಣ
ಸಾಂದರ್ಭಿಕ ಚಿತ್ರ | PC : aljazeera.com
ಖಾರ್ಟಮ್, ಆ.24: ಉತ್ತರ ದಾರ್ಫರ್ ನ ಎಲ್-ಫಾಶೆರ್ ನಗರದಲ್ಲಿನ ಆಸ್ಪತ್ರೆಯ ಮೇಲೆ ಅರೆ ಸೇನಾಪಡೆ ಶೆಲ್ ದಾಳಿ ನಡೆಸಿದ ಬಳಿಕ ಸಮೀಪದಲ್ಲಿ ಸ್ಥಳಾಂತರಗೊಂಡವರು ಆಶ್ರಯ ಪಡೆದಿದ್ದ ಡೇರೆಯಲ್ಲಿದ್ದ 6 ಮಹಿಳೆಯರು ಹಾಗೂ ಇಬ್ಬರು ಮಕ್ಕಳನ್ನು ಅಪಹರಿಸಿರುವುದಾಗಿ ಆಸ್ಪತ್ರೆಯ ಮೂಲಗಳು ರವಿವಾರ ಹೇಳಿವೆ.
ಸುಡಾನ್ ನಲ್ಲಿ 2023ರ ಎಪ್ರಿಲ್ ನಿಂದ ಸೇನಾಪಡೆ ಹಾಗೂ ಅರೆ ಸೇನಾಪಡೆ ನಡುವೆ ಸಂಷರ್ಘ ನಡೆಯುತ್ತಿದೆ. ಪಶ್ಚಿಮ ದಾರ್ಫರ್ ನಲ್ಲಿ ಸೇನಾಪಡೆಯ ವಶದಲ್ಲಿರುವ ಎಲ್-ಫಾಶರ್ ನಗರದ ಮೇಲೆ ಕಳೆದ ಒಂದು ವರ್ಷದಿಂದ ಅರೆ ಸೇನಾಪಡೆ ಮುತ್ತಿಗೆ ಹಾಕಿದ್ದು ಇಲ್ಲಿ ತೀವ್ರ ಹೋರಾಟ ಮುಂದುವರಿದಿದೆ.
ಎಲ್-ಫಾಶರ್ ನ ಅಬುಶೌಕ್ ಶಿಬಿರ ಪ್ರದೇಶಕ್ಕೆ ನುಗ್ಗಿದ ಅರೆ ಸೇನಾಪಡೆಯ ಯೋಧರು 6 ಮಹಿಳೆಯರು ಹಾಗೂ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ಶಿಬಿರ ಪ್ರದೇಶದ 20ಕ್ಕೂ ಅಧಿಕ ನಿವಾಸಿಗಳು ನಾಪತ್ತೆಯಾಗಿದ್ದಾರೆ ಎಂದು ಶೋಧ ಮತ್ತು ರಕ್ಷಣಾ ತಂಡದ ಹೇಳಿಕೆ ತಿಳಿಸಿದೆ. ಸಾವಿರಾರು ನಿರಾಶ್ರಿತರು ಆಶ್ರಯ ಪಡೆದಿರುವ ಅಬು ಶೌಕ್ ಶಿಬಿರಗಳ ಮೇಲೆ ಅರೆ ಸೇನಾಪಡೆ ಈ ತಿಂಗಳು ಎರಡು ಬಾರಿ ದಾಳಿ ನಡೆಸಿದ್ದು ಪ್ರಥಮ ದಾಳಿಯಲ್ಲಿ 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಶನಿವಾರ ಈ ಪ್ರದೇಶದಲ್ಲಿರುವ ಆಸ್ಪತ್ರೆಯ ತೀವ್ರ ನಿಗಾ ಘಟಕದ ಮೇಲೆ ನಡೆದ ದಾಳಿಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ ಎಂದು ವೈದ್ಯರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.