ಸುವೈದಾದಲ್ಲಿ ಕದನ ವಿರಾಮ ಘೋಷಿಸಿದ ಸಿರಿಯಾ
PC : aljazeera.com
ದಮಾಸ್ಕಸ್: ಮಾರಣಾಂತಿಕ ಘರ್ಷಣೆಗಳ ಬಳಿಕ ಶನಿವಾರ ಸುವೈದಾ ಪ್ರಾಂತದಲ್ಲಿ ತಕ್ಷಣ ಮತ್ತು ಸಮಗ್ರ ಕದನ ವಿರಾಮವನ್ನು ಸಿರಿಯಾ ಸರಕಾರ ಘೋಷಿಸಿರುವುದಾಗಿ ವರದಿಯಾಗಿದೆ.
ಎಲ್ಲಾ ಪಕ್ಷಗಳೂ ಒಪ್ಪಂದಕ್ಕೆ ಬದ್ಧವಾಗಿರಬೇಕು ಮತ್ತು ಯಾವುದೇ ಉಲ್ಲಂಘನೆಯನ್ನು ಸಾರ್ವಭೌಮತ್ವದ ಉಲ್ಲಂಘನೆ ಎಂದು ಪರಿಗಣಿಸುವುದಾಗಿ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ. ನಾಗರಿಕರನ್ನು ರಕ್ಷಿಸುವ ಮತ್ತು ಅವ್ಯವಸ್ಥೆಯನ್ನು ಕೊನೆಗೊಳಿಸುವ ಉದ್ದೇಶದಿಂದ ಸಿರಿಯಾದ ಆಂತರಿಕ ಭದ್ರತಾ ಪಡೆಗಳನ್ನು ಸುವೈದಾದಲ್ಲಿ ನಿಯೋಜಿಸುವ ಕಾರ್ಯ ಪ್ರಾರಂಭಗೊಂಡಿದೆ ಎಂದು ಹೇಳಿಕೆ ತಿಳಿಸಿದೆ. ಕದನ ವಿರಾಮವು ಸಮುದಾಯದ ಸದಸ್ಯರಿಗೆ ಸುರಕ್ಷಿತ ನಿರ್ಗಮನವನ್ನು ಖಾತರಿಪಡಿಸುತ್ತದೆ ಮತ್ತು ಮುತ್ತಿಗೆಗೆ ಒಳಗಾದ ನಾಗರಿಕರಿಗೆ ಹೊರಹೋಗಲು ಮಾನವೀಯ ಕಾರಿಡಾರ್ ಅನ್ನು ತೆರೆಯುತ್ತದೆ ಎಂದು ಸಿರಿಯಾದ ಡ್ರೂಝ್ ಸಮುದಾಯದ ಮುಖಂಡರು ಪ್ರತಿಕ್ರಿಯಿಸಿದ್ದಾರೆ.
ಅರಬ್ ಮತ್ತು ಅಮೆರಿಕದ ಮಧ್ಯಸ್ಥಿಕೆಯು ಶಾಂತಿ ಸ್ಥಾಪನೆಗೆ ನೆರವಾಗಿದೆ ಎಂದು ಸಿರಿಯಾದ ಅಧ್ಯಕ್ಷ ಅಹ್ಮದ್ ಅಲ್-ಶರಾ ಹೇಳಿದ್ದು ದಕ್ಷಿಣ ಸಿರಿಯಾ ಮತ್ತು ದಮಾಸ್ಕಸ್‍ನಲ್ಲಿ ಸಿರಿಯಾ ಸರಕಾರಿ ಪಡೆಗಳ ವಿರುದ್ಧ ಇಸ್ರೇಲಿನ ವೈಮಾನಿಕ ದಾಳಿಯನ್ನು ಟೀಕಿಸಿದ್ದಾರೆ. ಬಿದುವಿನ್ ಸಮುದಾಯದ ವಿರುದ್ಧ ಪ್ರತೀಕಾರ ದಾಳಿಯನ್ನು ಪ್ರಾರಂಭಿಸುವ ಮೂಲಕ ಸುವೈದಾದ ಸಶಸ್ತ್ರ ಗುಂಪುಗಳು ಸಂಘರ್ಷವನ್ನು ಪುನರುಜ್ಜೀವನಗೊಳಿಸಿವೆ. ಇಸ್ರೇಲ್‍ನ ಹಸ್ತಕ್ಷೇಪ ಸಂಘರ್ಷವನ್ನು ಅಪಾಯಕಾರಿ ಹಂತಕ್ಕೆ ದೂಡಿದೆ ಎಂದವರು ದೂಷಿಸಿದ್ದಾರೆ.
ಆದರೆ ಇಸ್ರೇಲ್ ಕದನ ವಿರಾಮವನ್ನು ದೃಢಪಡಿಸಿಲ್ಲ. ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರು ದಾಳಿ ನಡೆಸಿದ ಬಿದುವಿನ್ ಹೋರಾಟಗಾರರನ್ನು ವೈಭವೀಕರಿಸುತ್ತಿದ್ದು ಸಂಘರ್ಷದ ಸಂತ್ರಸ್ತರಾದ ಡ್ರೂಝ್ ಸಮುದಾಯದವರನ್ನು ದೂಷಿಸುತ್ತಿರುವುದಾಗಿ ವಿದೇಶಾಂಗ ಸಚಿವ ಗಿಡಿಯಾನ್ ಸಾ'ರ್ ಟೀಕಿಸಿದ್ದಾರೆ.
ಈ ಮಧ್ಯೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರೂಬಿಯೊ ನೆರವಿನಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್-ಶರಾ ಕದನ ವಿರಾಮಕ್ಕೆ ಒಪ್ಪಿದ್ದಾರೆ. ಕದನ ವಿರಾಮ ಒಪ್ಪಂದವನ್ನು ಟರ್ಕಿ, ಜೋರ್ಡಾನ್ ಹಾಗೂ ಇತರ ನೆರೆಹೊರೆಯವರು ಬೆಂಬಲಿಸಿದ್ದಾರೆ ಎಂದು ಟರ್ಕಿಗೆ ಅಮೆರಿಕದ ರಾಯಭಾರಿ ಥಾಮಸ್ ಬರಾಕ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಿಂಸಾಚಾರದ ಬಗ್ಗೆ ಸ್ವತಂತ್ರ ತನಿಖೆಗೆ ವಿಶ್ವಸಂಸ್ಥೆ ಆಗ್ರಹ
ಸಿರಿಯಾದಲ್ಲಿ ರವಿವಾರ(ಜುಲೈ 13)ದಿಂದ ಕನಿಷ್ಠ 718 ಜನರ ಸಾವಿಗೆ ಕಾರಣವಾದ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ, ಹಿಂಸಾಚಾರದ ಬಗ್ಗೆ ಸ್ವತಂತ್ರ ತನಿಖೆಗೆ ಆಗ್ರಹಿಸಿದೆ.
ಸುವೈದಾದಲ್ಲಿ ಆಹಾರ ಮತ್ತು ವೈದ್ಯಕೀಯ ಸರಬರಾಜಿನ ತೀವ್ರ ಕೊರತೆಯಿಂದಾಗಿ ಮಾನವೀಯ ಪರಿಸ್ಥಿತಿ ಕ್ಷಿಪ್ರಗತಿಯಲ್ಲಿ ಹದಗೆಡುತ್ತಿದೆ. ಸಂಘರ್ಷದಿಂದಾಗಿ ಎಲ್ಲಾ ಆಸ್ಪತ್ರೆಗಳ ಕಾರ್ಯ ನಿರ್ವಹಣೆಗೆ ತೊಡಕಾಗಿದ್ದು ನಗರದಲ್ಲಿ ವ್ಯಾಪಕ ಲೂಟಿ, ಹಿಂಸಾಚಾರ ಮುಂದುವರಿದಿದೆ ಎಂದು ಮಾನವ ಹಕ್ಕುಗಳ ಸಿರಿಯಾ ವೀಕ್ಷಣಾಲಯ(ಎಸ್‍ಒಎಚ್‍ಆರ್) ಶುಕ್ರವಾರ ವರದಿ ಮಾಡಿದೆ.