×
Ad

ಸಿರಿಯಾ | ಸುವೈದಾದಲ್ಲಿ ಡ್ರೂಜ್–ಬೆಡೋಯಿನ್ ಘರ್ಷಣೆ: ನೂರಾರು ಬೆಡೋಯಿನ್ ಕುಟುಂಬಗಳ ಸ್ಥಳಾಂತರ ಆರಂಭ

Update: 2025-07-21 22:26 IST

PC : aljazeera.com

ಡಮಾಸ್ಕಸ್, ಜು.21: ಸಿರಿಯಾದ ದಕ್ಷಿಣ ಭಾಗದ ಸುವೈದಾ ಪ್ರಾಂತ್ಯದಲ್ಲಿ ಡ್ರೂಜ್ ಮತ್ತು ಬೆಡೋಯಿನ್ ಸಮುದಾಯಗಳ ನಡುವಿನ ತೀವ್ರ ಘರ್ಷಣೆಯ ನಡುವೆಯೇ ಸಿರಿಯನ್ ಸರ್ಕಾರವು ನೂರಾರು ಬೆಡೋಯಿನ್ ಕುಟುಂಬಗಳನ್ನು ಸ್ಥಳಾಂತರಿಸಲು ಪ್ರಾರಂಭಿಸಿದೆ. ತಾತ್ಕಾಲಿಕ ಕದನ ವಿರಾಮದ ನಡುವೆ, ಮಾನವೀಯ ಸಹಾಯದೊಂದಿಗೆ ಸ್ಥಳಾಂತರ ಪ್ರಕ್ರಿಯೆ ಆರಂಭವಾಗಿದೆ.

ಸಿರಿಯನ್ ಅರಬ್ ರೆಡ್ ಕ್ರೆಸೆಂಟ್‌ ನ ಬೆಂಗಾವಲಿನಲ್ಲಿ, ಆಂಬ್ಯುಲೆನ್ಸ್‌ಗಳು ಮತ್ತು ಆಹಾರ, ನೀರು, ಔಷಧಗಳು ಹಾಗೂ ಇಂಧನ ಸಹಿತ ಬಸ್‌ ಗಳು ಸೋಮವಾರ ಬೆಳಿಗ್ಗೆ ಸುವೈದಾದಿಂದ ಸುಮಾರು 500 ಬೆಡೋಯಿನ್ ಜನರನ್ನು ಸ್ಥಳಾಂತರಿಸಿವೆ. ಒಟ್ಟು 1,500 ಜನರನ್ನು ಹತ್ತಿರದ ದಾರಾ ಪ್ರಾಂತ್ಯಕ್ಕೆ ಕರೆದೊಯ್ಯಲು ಸರ್ಕಾರ ಯೋಜಿಸಿದೆ.

ಜುಲೈ 13ರಿಂದ ಆರಂಭವಾದ ಘರ್ಷಣೆಗಳಲ್ಲಿ ಇತ್ತೀಚಿನ ವರದಿಗಳ ಪ್ರಕಾರ ಕನಿಷ್ಠ 260 ಜನರು ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರವು 1,28,571 ಜನರನ್ನು ಸ್ಥಳಾಂತರಗೊಳಿಸಿದೆ ಎಂದು ಯುಎನ್‌ ನ ಅಂತರರಾಷ್ಟ್ರೀಯ ವಲಸೆ ಸಂಸ್ಥೆ (IOM) ತಿಳಿಸಿದೆ.

ಇಸ್ರೇಲ್ ಕೂಡ ಈ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿ, ಡಮಾಸ್ಕಸ್‌ ನಲ್ಲಿರುವ ಸಿರಿಯಾದ ರಕ್ಷಣಾ ಸಚಿವಾಲಯದ ಕಟ್ಟಡಗಳ ಮೇಲೆ ವಾಯುದಾಳಿ ನಡೆಸಿದೆ. ಇಸ್ರೇಲ್ ಸೇನೆ ಡ್ರೂಜ್ ಸಮುದಾಯವನ್ನು "ಸಹೋದರರು" ಎಂದು ಕರೆದು, ಅವರನ್ನು ರಕ್ಷಿಸಲು ಈ ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದೆ. ಸುವೈದಾದಲ್ಲಿ ಒಟ್ಟು ಏಳು ಜಿಲ್ಲೆಗಳಿವೆ. ಅವುಗಳಲ್ಲಿ ವಾಸಿಸುತ್ತಿರುವ ಬೆಡೋಯಿನ್ ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಸ್ವಯಂಪ್ರೇರಣೆಯಿಂದ ಹೊರಡುವ ಸ್ಥಿತಿಗೆ ತಲುಪಿವೆ.

"ಸಂಪೂರ್ಣ ಕದನ ವಿರಾಮಕ್ಕಾಗಿ ನಾವು ಪ್ರಯತ್ನಿಸುತ್ತಿದ್ದೇವೆ. ಸುವೈದಾವನ್ನು ಸುರಕ್ಷಿತಗೊಳಿಸಲು ಪ್ರಾಂತ್ಯವನ್ನು ಭದ್ರತಾ ಪಡೆಗಳು ಸುತ್ತುವರಿದಿದೆ" ಎಂದು ಸಿರಿಯನ್ ಆಂತರಿಕ ಸಚಿವ ಅಹ್ಮದ್ ಅಲ್-ದಲಾತಿ ಸನಾ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದರು.

ಸಿರಿಯಾದ ಮಧ್ಯಂತರ ಅಧ್ಯಕ್ಷ ಅಹ್ಮದ್ ಅಲ್-ಶರಾ ಡ್ರೂಜ್ ಸಮುದಾಯದ ನಾಯಕರ ಆಕ್ರೋಶ ತಣಿಸಲು ಪ್ರಯತ್ನಿಸಿದ್ದಾರೆ. ಅವರು ಡ್ರೂಜ್ ಆಧ್ಯಾತ್ಮಿಕ ನಾಯಕ ಶೇಖ್ ಹಿಕ್ಮತ್ ಅಲ್-ಹಿಜ್ರಿಗೆ ನಿಷ್ಠರಾಗಿರುವ ಗುಂಪುಗಳ ನಡೆಯನ್ನು ಖಂಡಿಸಿದ್ದಾರೆ. ಹಿಂಸಾಚಾರದ ಹೊಣೆಗಾರರನ್ನು ಶಿಕ್ಷಿಸುವ ಭರವಸೆ ನೀಡಿದ್ದಾರೆ.

Members of the Syrian government’s security forces deploy on a road in Taarah that goes to Daraa on July 21, 2025 [Rami al Sayed/AFP]

 

ಡ್ರೂಜ್ ಮತ್ತು ಬೆಡೋಯಿನ್ ಹೋರಾಟಗಾರರ ನಡುವೆ ಶನಿವಾರದಿಂದ ಜಾರಿಗೆ ಬಂದ ಕದನ ವಿರಾಮದ ಅನ್ವಯ, ಬೆಡೋಯಿನ್ ಹೋರಾಟಗಾರರು ತಮ್ಮ ಸೆರೆಯಲ್ಲಿದ್ದ ಡ್ರೂಜ್ ಮಹಿಳೆಯರನ್ನು ಬಿಡುಗಡೆ ಮಾಡಿ, ಪ್ರಾಂತ್ಯ ತೊರೆದು ಹೋಗಬೇಕು ಎಂದು ಹೇಳಲಾಗಿತ್ತು. ಆದರೆ ರವಿವಾರದ ಮಾತುಕತೆ ವಿಫಲವಾದ ನಂತರ ಕೆಲವು ಭಾಗಗಳಲ್ಲಿ ಪುನಃ ಸಂಘರ್ಷ ಉಂಟಾಗಿದೆ ಎಂದು ಯುನೈಟೆಡ್ ಕಿಂಗ್‌ಡಮ್ ಮೂಲದ ಮಾನವ ಹಕ್ಕುಗಳ ವೀಕ್ಷಣಾಲಯ ವರದಿ ಮಾಡಿದೆ.

ಈ ನಡುವೆ ಯುಎನ್ ನೆರವು ವಿತರಣಾ ತಂಡಗಳು ಮತ್ತು ವೈದ್ಯಕೀಯ ನೆರವಿನೊಂದಿಗೆ ಸುವೈದಾವನ್ನು ಪ್ರವೇಶಿಸಿವೆ. ಪರಿಸ್ಥಿತಿ ಸ್ಥಿರಗೊಳ್ಳುವವರೆಗೆ ಸ್ಥಳಾಂತರ ಪ್ರಕ್ರಿಯೆ ಮುಂದುವರೆಯುವ ನಿರೀಕ್ಷೆಯಿದೆ.

ಸೌಜನ್ಯ: Aljazeera.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News